×
Ad

ಶಿವಮೊಗ್ಗದ ಸ್ಥಳೀಯ ಸಂಸ್ಥೆಗಳಿಗೆ 3.25 ಕೋಟಿ ರೂ. ಅನುದಾನ

Update: 2016-04-26 21:58 IST

ಶಿವಮೊಗ್ಗ, ಎ. 26: ಶಿವಮೊಗ್ಗ ಜಿಲ್ಲೆಯ 9 ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ಪ್ರಸ್ತುತ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲು ರಾಜ್ಯ ಸರಕಾರ ಎರಡು ಹಂತಗಳಲ್ಲಿ ಒಟ್ಟಾರೆ 3.25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

ಜಿಲ್ಲೆಯಲ್ಲಿ 1 ಮಹಾನಗರ ಪಾಲಿಕೆ, ಎರಡು ನಗರಸಭೆ, ಒಂದು ಪುರಸಭೆ ಹಾಗೂ ಐದು ಪಟ್ಟಣ ಪಂಚಾಯತ್‌ಗಳಿವೆ. ಪ್ರಥಮ ಹಂತದಲ್ಲಿ 1.65 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿತ್ತು. ಈ ಅನುದಾನವನ್ನು ಈಗಾಗಲೇ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದೀಗ ಎರಡನೆ ಹಂತದಲ್ಲಿ 1.60 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಪ್ರಮೋದ್‌ರವರು ಮಾಹಿತಿ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೆ ಹಂತದಲ್ಲಿ ಬಿಡುಗಡೆಯಾಗಿರುವ ಅನುದಾನಕ್ಕೆ ಈಗಾಗಲೇ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಿಯಾ ಯೋಜನೆ ರೂಪಿಸಿ ಸಿದ್ಧಪಡಿಸಿ ಸಲ್ಲಿಸಿವೆ. ಕುಡಿಯುವ ನೀರಿಗೆ ಸಂಬಂಧಿಸಿದ ಅಗತ್ಯ ಕಾಮಗಾರಿ ಆರಂಭಿಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬೇಸಿಗೆಯ ಪ್ರಾರಂಭದ ದಿನಗಳಲ್ಲಿ ಜಿಲ್ಲೆಯ ಸೊರಬ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿತ್ತು. ಪ್ರಸ್ತುತ ಸಮಸ್ಯೆ ಪರಿಹರಿಸಲಾಗಿದೆ. ಉಳಿದಂತೆ ನಗರದ ಇತರೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಗಂಭೀರ ಸ್ವರೂಪದ ನೀರಿನ ಅಭಾವ ತಲೆದೋರಿಲ್ಲ. ತಾಂತ್ರಿಕ ಹಾಗೂ ಲೋಡ್‌ಶೆಡ್ಡಿಂಗ್ ಕಾರಣದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾದ ವೇಳೆ ಸಮಸ್ಯೆ ತಲೆದೋರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ಕ್ರಿಯಾಯೋಜನೆ ರೂಪಿಸಿ, ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಈಗಾಗಲೇ ಎಲ್ಲ ಮುಖ್ಯಸ್ಥರಿಗೆ ಸೂಚನೆ ಕೊಡಲಾಗಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸುವಂತೆ ಸಲಹೆ ಕೊಡಲಾಗಿದೆ ಎಂದು ತಿಳಿಸಿದರು. ಮಾಹಿತಿ ಸಂಗ್ರಹ

ಮುಂದಿನ ದಿನಗಳಲ್ಲಿ ಸಮಸ್ಯೆ ಉದ್ಭವವಾಗಬಹುದಾದ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಪ್ರದೇಶಗಳ ಪೂರ್ವಭಾವಿ ಮಾಹಿತಿ ಸಂಗ್ರಹಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ಅನಿವಾರ್ಯವಾದಲ್ಲಿ ಬೋರ್‌ವೆಲ್ ಕೊರೆಯಿಸುವಂತೆಯೂ ಸ್ಥಳೀಯಾಡಳಿತ ಮುಖ್ಯಸ್ಥರಿಗೆ ಸಲಹೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಪ್ರಮೋದ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News