×
Ad

ಶಿಕಾರಿಪುರವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಮನವಿ

Update: 2016-04-26 22:08 IST

 ಶಿಕಾರಿಪುರ,ಎ.26: ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲು ಅಗತ್ಯವಿರುವ ಮಾನದಂಡವನ್ನು ಶಿಕಾರಿಪುರ ಹೊಂದಿದ್ದರೂ ಸರಕಾರ ತಾಲೂಕನ್ನು ಇದುವರೆಗೂ ಬರಗಾಲ ಪೀಡಿತ ಎಂದು ಘೋಷಿಸಿಲ್ಲ ಸರಕಾರ ಈ ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಶಿಕಾರಿಪುರ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸಬೇಕೆಂದು ಶಾಸಕ ಬಿ.ವೈ ರಾಘವೇಂದ್ರ ಮನವಿ ಮಾಡಿದ್ದಾರೆ.

 ಮಂಗಳವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಿನ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಇದುವರೆಗೆ ವಾಡಿಕೆಗಿಂತ 278.3 ಮಿ.ಮೀ ಮಳೆ ಪ್ರಮಾಣ ಕಡಿಮೆಯಾಗಿದ್ದು, ಸಹಸ್ರಾರು ಎಕರೆ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗದೆ ಈಗಾಗಲೇ ಬಿತ್ತನೆಯಾಗಿರುವ ಭತ್ತ, ಮೆಕ್ಕೆಜೋಳಕ್ಕೆ ವಿದ್ಯುತ್ ಕೊರತೆಯಿಂದ ಫಸಲಿನ ಸಾಧ್ಯತೆ ತೀವ್ರವಾಗಿ ಕುಸಿಯಲಿದೆ ಎಂದರು.

ತಾಲೂಕಿನ 1,171 ಕೆರೆಗಳಲ್ಲಿ ಕೇವಲ 24 ಕೆರೆಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಸಂಗ್ರಹವಿದ್ದು,ಸಕಾಲದಲ್ಲಿ ಮಳೆಯಿಲ್ಲದೆ ಕೆರೆ ಕಟ್ಟೆ ತುಂಬದಿರುವುದರಿಂದ ಶೇ.90 ಬತ್ತಿ ಹೋಗಿದೆ. 23,500 ರೈತರ ಪಂಪ್‌ಸೆಟ್‌ಗಳಲ್ಲಿ ಅಂತರ್ಜಲ ಕೊರತೆಯಿಂದ ನೀರಿನ ಪ್ರಮಾಣ ಕಡಿಮೆಯಾಗಿ ಜನಜಾನುವಾರುಗಳಿಗೆ ನೀರಿನ ಸಮಸ್ಯೆ ಉದ್ಭವವಾಗಿದೆ ಎಂದ ಅವರು, ತಾಲೂಕು ಬರಗಾಲ ಪೀಡಿತ ಎಂದು ಘೋಷಿಸಲು ಸಂಸದ ಯಡಿಯೂರಪ್ಪನವರ ಜೊತೆಗೆ ವೌಕಿಕ ಹಾಗೂ ಪತ್ರ ಬರೆದು ಮುಖ್ಯಮಂತ್ರಿ,ಕಂದಾಯ ಸಚಿವರಿಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು. ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಜಿಲ್ಲೆಯಾದ್ಯಂತ ಮಳೆ ಕೊರತೆಯಾಗಿದ್ದು, ಶಿಕಾರಿಪುರ ಹಾಗೂ ಸೊರಬದಲ್ಲಿ ವಿಪರೀತವಾಗಿದೆ ಎಂದ ಅವರು , ಸರಕಾರಕ್ಕೆ ಈ ಕೂಡಲೇ ಶಿಕಾರಿಪುರವನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲು ಶಿಫಾರಸು ಕಳುಹಿಸುವುದಾಗಿ ತಿಳಿಸಿ ಅಗತ್ಯವಿದ್ದಲ್ಲಿ ಗೋಶಾಲೆ ಆರಂಭಿಸುವಂತೆ, ವಾಟರ್ ಟ್ಯಾಂಕ್ ಸಮೀಪ ಗೋಕಟ್ಟೆ ನಿರ್ಮಾಣದ ಜೊತೆಗೆ ತುರ್ತು ಅಗತ್ಯವಿರುವೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.

 ತಾಲೂಕಿನ ಎಂಸಿಆರ್‌ಪಿ ಕಾಲನಿ ಬಳಿ ಹಕ್ಕಿಪಿಕ್ಕಿ ಜನಾಂಗದ 200 ಕುಟುಂಬಕ್ಕೆ ಕುಡಿಯುವ ನೀರಿಲ್ಲದೆ ಹಾಹಾಕಾರ ಉದ್ಭವಿಸಿ 6-8 ದಿನವಾಗಿದು,್ದ ಕೂಡಲೇ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮಕ್ಕೆ ಭದ್ರ ಕಾಡಾ ಮಂಡಳಿ ಅಧ್ಯಕ್ಷ ನಗರದ ಮಹಾದೇವಪ್ಪ ಸೂಚಿಸಿದಾಗ ಈಗಾಗಲೇ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು, 2-3 ದಿನದಲ್ಲಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವುದಾಗಿ ಪಿಡಿಒ ತಿಳಿಸಿದರು. ಇದರಿಂದ ಕೆರಳಿದ ಸಚಿವರು ನೀರು ಎಲ್ಲರ ನಿತ್ಯದ ಅಗತ್ಯವಾಗಿದ್ದು ಕೂಡಲೇ ಟ್ಯಾಂಕರ್ ಮೂಲಕ ನೀಡಿ ತಪ್ಪಿದಲ್ಲಿ ಕರ್ತವ್ಯ ಲೋಪದಲ್ಲಿ ಅಮಾನತು ಗೊಳಿಸುವುದಾಗಿ ಎಚ್ಚರಿಸಿದರು.

ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರಸನ್ನಕುಮಾರ್, ಜಿಪಂ ಸಿಇಒ ರಾಕೇಶ್‌ಕುಮಾರ್, ಉಪವಿಭಾಗಾಧಿಕಾರಿ ಸತೀಶಕುಮಾರ್, ಪುರಸಭಾಧ್ಯಕ್ಷೆ ಗೌರಮ್ಮ,ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ,ಸದಸ್ಯ ವಸಂತಗೌಡ,ನಾಗರಾಜಗೌಡ,ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News