×
Ad

ಕೂಲ್ ಕೊಡಗಿನಲೂ್ಲ ಹಾಟ್ ದಿನಗಳು

Update: 2016-04-26 22:15 IST

 ಎಸ್.ಕೆ.ಲಕ್ಷ್ಮೀಶ್

ಮಡಿಕೇರಿ, ಎ.26: ರಾಜ್ಯದ ಇತರ ಭಾಗಗಳಂತೆ ಕೊಡಗಿನ ಜನ ಕೂಡ ಈ ಹಿಂದೆ ಕಂಡರಿಯದ ತಾಪಮಾನಕ್ಕೆ ಬೆಚ್ಚಿ ಬಿದ್ದಿದ್ದಾರೆ. ಇತರ ಜಿಲ್ಲೆಗಳಲ್ಲಿ ಬಿಸಿಲ ಬೇಗೆಗೆ ಜನರ ದೈಹಿಕ ಸಾಮರ್ಥ್ಯ ಕುಸಿಯುತ್ತಿರುವ ಬೆಳವಣಿಗೆ ಕಂಡು ಬಂದಿದೆ. ದೇಹದಲ್ಲಿ ನೀರಿನ ಅಂಶವನ್ನು ಬತ್ತಿಸಿಬಿಡುವಷ್ಟು ವೇಗದಲ್ಲಿ ಸೂರ್ಯನ ಶಾಖ ಜನರನ್ನು ಆವರಿಸಲು ಆರಂಭಿಸಿದರೆ ಹೀಟ್ ಸ್ಟ್ರೋಕ್ ಎನ್ನುವ ಕಾಯಿಲೆ ಕಾಡಬಹುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆಯನ್ನು ನೀಡಿದೆ.

ಮಂಜಿನ ಅಲೆಯಲ್ಲಿ ಮುಳುಗೇಳುತ್ತಿದ್ದ ಹಸಿರು ಪರಿಸರದ ಕೂಲ್ ಕೊಡಗು ಇಂದು ಹಿಂದಿನಂತಿಲ್ಲ. ಎಲ್ಲವೂ ಬದಲಾದಂತೆ ಜಿಲ್ಲೆಯ ಪರಿಸರವೂ ಅಸಮತೋಲನದಿಂದ ತತ್ತರಿಸಿವೆೆ. ಅಭಿವೃದ್ಧಿಯ ನೆಪವೊಡ್ಡಿ ಸಾವಿರಾರು ಮರಗಳನ್ನು ನಾಶ ಮಾಡಿರುವ ಕಾರಣದಿಂದಲೋ ಅಥವಾ ಮುನಿಸಿಕೊಂಡ ಪ್ರಕೃತಿಯಿಂದಲೋ ಏನೋ, ಕೊಡಗು ಇಂದು ಮಳೆ ಇಲ್ಲದೆ ಕಾವೇರತೊಡಗಿದೆ. ಕಾವೇರಿ ಪ್ರತ್ಯಕ್ಷಳಾದರೆ ನಾನು ಜನ್ಮ ಪಡೆದ ಮೂಲ ಸ್ಥಳ ಇದುವೇ ಎಂದು ಪ್ರಶ್ನಿಸಿಬಿಡುವಷ್ಟು ಬರದ ಛಾಯೆ ಜಿಲ್ಲೆಯನ್ನು ಕಾಡಿದೆ. ನದಿಗಳು ಬತ್ತಿ ಹೋಗಿದ್ದು, ಗ್ರಾಮೀಣ ಭಾಗದ ಬಾವಿಗಳು ಹನಿ ನೀರಿಲ್ಲದೆ ಮಳೆಗಾಗಿ ಎದುರು ನೋಡುತ್ತಿವೆ. ಬಾವಿಗಳನ್ನೇ ಕುಡಿಯುವ ನೀರಿನ ಮೂಲವಾಗಿಸಿಕೊಂಡಿರುವ ಗ್ರಾಮಗಳಲ್ಲಿ ಬರ ಎಂದರೆ ಏನು ಎನ್ನುವ ಪರಿಚಯವಾಗುತ್ತಿದೆ. ನಗರ ಮತ್ತು ಪಟ್ಟಣಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಇತರ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆ. ನ ಗಡಿಯನ್ನು ದಾಟಿದ್ದರೆ ಕೊಡಗಿನಲ್ಲಿ 30 ರಿಂದ 35 ರ ಆಸುಪಾಸಿನಲ್ಲಿದೆ. ಸದಾ ತಂಪಿನ ವಾತಾವರಣದಲ್ಲಿರುವ ಜಿಲ್ಲೆಯ ಜನರಿಗೆ ಇಷ್ಟು ಶಾಖವೇ ಸಾಕಾಗಿ ಹೋಗಿದೆ. ಮಕ್ಕಳು ಮತ್ತು ಇಳಿವಯಸ್ಸಿನವರು ಸೆಕೆ ತಾಳಲಾರದೆ ಪರಿತಪಿಸುತ್ತಿದ್ದಾರೆ. ಇಂಥ ವ್ಯತಿರಿಕ್ತ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಜವಾಬ್ದಾರಿ ದೊಡ್ಡದಾಗಿದೆ.

ಏರುತ್ತಿರುವ ತಾಪಮಾನದಲ್ಲಿ ಹೀಟ್ ಸ್ಟ್ರೋಕ್ ಭೀತಿ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವಂತೆ ಏರುತ್ತಿರುವ ಭೀಕರ ತಾಪಮಾನದಿಂದಲೂ ಕಾಯಿಲೆಗಳು ಎದುರಾಗಬಹುದು. ಈಗಾಗಲೆ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಕಾವಿಗೆ ಮಕ್ಕಳು ಹಾಗೂ ವಯೋವೃದ್ಧರು ಆಸ್ಪತ್ರೆಗೆ ದಾಖಲಾದ ಕೆಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೆ ಭೀಕರ ಬಿಸಿಲಿನಲ್ಲಿ ಕಾಡುವ ಹೀಟ್ ಸ್ಟ್ರೋಕ್ ಬಗ್ಗೆ ಆರೋಗ್ಯ ಇಲಾಖೆ ತಲೆ ಕೆಡಿಸಿಕೊಂಡಿದೆ. ರಾಜ್ಯದ ಎಲ್ಲ್ಲ ಜಿಲ್ಲೆಗಳ ಆರೋಗ್ಯ ಕೇಂದ್ರಗಳಿಗೆ ಆದೇಶವನ್ನು ನೀಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಹೀಟ್ ಸ್ಟ್ರೋಕ್ ಬಾರದಂತೆ ತಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳು ಮತ್ತು ಕಾಯಿಲೆ ಬಂದ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಸೂಚನೆಯನ್ನು ನೀಡಿದ್ದಾರೆ.

ಭೀಕರ ಬಿಸಿಲಿನಲ್ಲಿ ಇವುಗಳನ್ನು ಅನುಸರಿಸಬೇಕು:

ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ತೊಡಬೇಕು, ಗಾಳಿಯಾಡುವಂತಿರುವ ಪಾದರಕ್ಷೆ ಧರಿಸಬೇಕು, ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು, ಆಗಾಗ ನಿಧಾನವಾಗಿ ಧಾರಾಳವಾಗಿ ಉಪ್ಪು ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು, ಹಣ್ಣಿನ ರಸ, ಪಾನಕಗಳನ್ನು ಸೇವಿಸಬೇಕು, ಕಾರ್ಬೊನೇಟೆಡ್ ಪಾನೀಯಗಳನ್ನು ವರ್ಜಿಸಬೇಕು, ಕಾಫಿ, ಟೀ, ಮದ್ಯಪಾನ, ಮಾಡಬಾರದು. ನೀರು ಮಜ್ಜಿಗೆ, ಎಳನೀರು ಕುಡಿಯಬಹುದು, ಬೆಚ್ಚಗಿನ, ಮಸಾಲೆ ರಹಿತ, ಶುದ್ಧ ಸಾತ್ವಿಕ ಆಹಾರ ಸೇವಿಸಬೇಕು, ಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬಾರದು, ಮಾಂಸಾಹಾರವನ್ನು ತ್ಯಜಿಸಬೇಕು. ತಾಪಮಾನ ಹೆಚ್ಚಾದಾಗ ವ್ಯಕ್ತಿಯ ದೇಹದ ಹೊರಪದರದಲ್ಲಿನ ರಕ್ತನಾಳಗಳು ಸಂಕುಚಿತಗೊಂಡು ಒಳಗಿನ ಉಷ್ಣತೆ ಹೆಚ್ಚಾಗಿ ಅಂಗಾಂಗಗಳು ನಿಷ್ಕ್ರಿಯಗೊಂಡು ಹೆಚ್ಚಿನ ಹಾನಿಯಾಗುವ ಸಾಧ್ಯತೆಗಳಿವೆೆ. ವ್ಯಕ್ತಿ ತೊದಲು ಅಥವಾ ಅರ್ಥರಹಿತವಾಗಿ ವಿಚಿತ್ರವಾಗಿ ಮಾತನಾಡಿದರೆ ಗಾಬರಿಗೊಳ್ಳದೆ ಸಮಾಧಾನವಾಗಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಬೇಕೆಂದು ಡಾ.ರಂಗಪ್ಪ ಹೇಳಿದರು.

ಏರುತ್ತಿರುವ ತಾಪಮಾನದಿಂದ ಉಂಟಾಗುವ ಹೀಟ್ ಸ್ಟ್ರೋಕ್ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಕಳುಹಿಸಿರುವ ಆದೇಶವನ್ನು ಜಿಲ್ಲೆಯ ಎಲ್ಲ್ಲ ಆರೋಗ್ಯ ಕೇಂದ್ರಗಳಿಗೆ ರವಾನಿಸಿ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದೆಂದು ಅವರು ಸ್ಪಷ್ಟಪಡಿಸಿದರು.

ಬಿಸಿಲಿನ ತಾಪಮಾನಕ್ಕೆ ವಿಪರೀತ ತಲೆನೋವು ಕಾಡುವುದು, ತಲೆ ಸುತ್ತುವುದು, ಎಷ್ಟೇ ಸೆಕೆಯಿದ್ದರೂ ಬೆವರಿಳಿಯದೆ ಕಾಡುವ ಆಯಾಸ, ಚರ್ಮ ಕೆಂಪಗಾಗುವುದು, ಮಾಂಸ ಖಂಡಗಳು ಶಕ್ತಿ ಕಳೆದುಕೊಳ್ಳುವುದು, ವಾಂತಿ ಕಾಣಿಸಿಕೊಳ್ಳುವುದು, ದೇಹದ ಉಷ್ಣತೆ ಮತ್ತು ಹೃದಯ ಬಡಿತ ಹೆಚ್ಚಾಗುವುದು, ದೀರ್ಘವಾದ ತೀವ್ರ ಉಸಿರಾಟ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಇಲ್ಲದಿದ್ದಲ್ಲಿ ಮೂರ್ಛೆ ಬೀಳುವುದು ಅಥವಾ ಪ್ರಜ್ಞೆ ತಪ್ಪಬಹುದು. ಒಂದು ವೇಳೆ ಈ ರೀತಿ ವ್ಯಕ್ತಿ ಆಘಾತಕ್ಕೊಳಗಾದರೆ ವ್ಯಕ್ತಿ ಧರಿಸಿದ ಬಟ್ಟೆ ಹಾಗೂ ಪಾದರಕ್ಷೆಗಳನ್ನು ತೆಗೆಯಬೇಕು ಮತ್ತು ತಂಪಾದ ನೆರಳಿನ ಪ್ರದೇಶದಲ್ಲಿ ಮಲಗಿಸಬೇಕು, ತಣ್ಣಗಿನ ನೀರನ್ನು ಸಿಂಪಡಿಸಬೇಕು, ಯಾವುದೇ ಔಷಧ ನೀಡಬಾರದು, ತಕ್ಷಣ ದೇಹವನ್ನು ಅತಿಯಾಗಿ ತಂಪು ಮಾಡಬಾರದು, ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧವಾದ ನೀರನ್ನು ಸ್ವಲ್ಪಸ್ವಲ್ಪವಾಗಿ ಕುಡಿಸಬೇಕು.

                                                                                   

                                                      -ಡಾ.ಒ.ಆರ್.ಶ್ರೀರಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News