ಅಂಬೇಡ್ಕರ್ ಆದರ್ಶಗಳನ್ನು ದಲಿತರು ಮೈಗೂಡಿಸಿಕೊಳ್ಳಲಿ: ಶಾಸಕ ಬಿ.ಬಿ.ನಿಂಗಯ್ಯ
ಚಿಕ್ಕಮಗಳೂರು, ಎ.26: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಬದುಕು, ಚಿಂತನೆ ಮತ್ತು ಆದರ್ಶಗಳನ್ನು ದಲಿತ ವರ್ಗ ಮೈಗೂಡಿಸಿಕೊಂಡು, ಅವರು ಹಾಕಿಕೊಟ್ಟ ಹಾದಿಯಲ್ಲೇ ಸಾಗಬೇಕು ಎಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಸಲಹೆ ಮಾಡಿದರು.
ತಾಲೂಕಿನ ಬೆಟ್ಟದ ಮರಡಿಯಲ್ಲಿ ಸ್ಥಳೀಯ ದಲಿತ ನವ ಯುವಕ ಸಂಘ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್‌ರವರು ದಲಿತರು ಮತ್ತು ಹಿಂದುಳಿದವರ ಏಳಿಗೆಗಾಗಿ ದುಡಿದ ಮಹಾನ್ ಚೇತನ. ಅಂಬೇಡ್ಕರ್‌ರವರ ಸಂವಿಧಾನದಿಂದಾಗಿ ಶೋಷಿತರು ದೇಶದಲ್ಲಿಂದು ಗೌರವದಿಂದ ಬದುಕುವಂತಾಗಿದೆ. ಅವರು ನೀಡಿದ ಮೀಸಲಾತಿಯಿಂದಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ ಎಂದರು.
ದಲಿತ ವರ್ಗ ಅಂಬೇಡ್ಕರ್ ಅವರನ್ನು ಮರೆಯಬಾರದು. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಸಾಗಬೇಕು. ಅವರ ಆಶಯದಂತೆ ದುಶ್ಚಟಗಳನ್ನು ಬಿಟ್ಟು ಶಿಕ್ಷಣವಂತರಾಗಿ ಬಾಳಬೇಕು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಣತಿ ಜಕ್ಕನಹಳ್ಳಿ ರಸ್ತೆಯ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಅನುದಾನ ಬಿಡುಗಡೆಗೊಂಡು ಕಾಮಗಾರಿ ಆರಂಭಗೊಳ್ಳಲಿದೆ. ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಜೆಡಿಎಸ್ ಆಲ್ದೂರು ಹೋಬಳಿ ಅಧ್ಯಕ್ಷ ಡಿ.ಎಂ.ಪ್ರವೀಣ್ ಮಾತನಾಡಿ, ದಲಿತರು ತಮಗೆ ಎಷ್ಟೇ ಕಷ್ಟವಾದರೂ ಬಿಡದೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಈ ವೇಳೆ ಗ್ರಾಪಂ ಸದಸ್ಯ ಪೂರ್ಣೇಶ್, ಕಾಫಿ ಬೆಳೆಗಾರರಾದ ಜಗನ್ನಾಥ್‌ಗೌಡ, ಬಿ.ಎ.ಮಹೇಶ್, ದಲಿತ ನವಯುವಕ ಸಂಘದ ಅಧ್ಯಕ್ಷ ಡಿ.ಯು.ದೇವರಾಜ್, ರವಿ, ಉಮೇಶ್, ವೀರಪ್ಪಉಪಸ್ಥಿತರಿದ್ದರು.