ಜನರ ಸಂಕಷ್ಟಕೆ್ಕ ಸ್ಪಂದಿಸಲು ಸಚಿವರ ಮನವಿ
ಬೆಂಗಳೂರು, ಎ. 26: ರಾಜ್ಯದಲ್ಲಿನ ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪೆನಿಗಳು, ಉದ್ಯಮಿಗಳು, ಚಿತ್ರರಂಗದ ಗಣ್ಯರು, ಸಂಘ-ಸಂಸ್ಥೆಗಳು, ಮಠಾಧಿಪತಿಗಳು ಉದಾರ ಮನೋಭಾವವುಳ್ಳ ಎಲ್ಲರೂ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ಬರ ಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಅಗತ್ಯ ಮೇವು ಒದಗಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ 1 ಕೋಟಿ ರೂ.ಗಳ ನೆರವು ನೀಡಿದ್ದಾರೆ. ಅದೇ ರೀತಿಯಲ್ಲಿ ಎಲ್ಲರೂ ಸಹಾಯ ಹಸ್ತಚಾಚಬೇಕು ಎಂದು ಪರಮೇಶ್ವರ್ ಕೋರಿದ್ದಾರೆ.
ರಾಜಕೀಯ ಸಲ್ಲ: ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಕಾಡುತ್ತಿದ್ದು, ಕೇಂದ್ರಕ್ಕೆ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯುವ ಬಗ್ಗೆ ಸಿಎಂ ಸಿದ್ದರಾಮಯ್ಯನವರೊಂದಿಗೆ ಚರ್ಚಿಸುವೆ. ವಿಪಕ್ಷಗಳು ಮಾನವೀಯತೆ ನೆಲೆಯಲ್ಲಿ ಸ್ಪಂದಿಸಬೇಕೇ ಹೊರತು ಈ ವಿಚಾರದಲ್ಲಿ ರಾಜಕಾರಣ ಸಲ್ಲ ಎಂದು ಪರಮೇಶ್ವರ್ ಆಕ್ಷೇಪಿಸಿದ್ದಾರೆ.
ರಾಜ್ಯದಲ್ಲಿ 148 ವರ್ಷಗಳ ದಾಖಲೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಹಿಂದೆಂದು ಕಂಡರಿಯದ ತೀವ್ರ ಸ್ವರೂಪದ ಬರ ಸ್ಥಿತಿ ಹಿನ್ನೆಲೆಯಲ್ಲಿ ಜನ-ಜಾನುವಾರುಗಳು ಸಂಕಷ್ಟದಲ್ಲಿವೆ. ರಾಜ್ಯ ಸರಕಾರ ಸಮರೋಪಾದಿಯಲ್ಲಿ ಬರ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ ಎಂದು ಪರಮೇಶ್ವರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.