×
Ad

ಉದ್ಯಮಶೀಲತೆ ಒಂದು ರೀತಿಯ ಮನಸ್ಥಿತಿ: ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅಭಿಪ್ರಾಯ

Update: 2016-04-27 22:04 IST

ಶಿವಮೊಗ್ಗ, ಎ. 27: ಉದ್ಯಮಶೀಲತೆ ಎಂಬುವುದು ಒಂದು ರೀತಿಯ ಮನಸ್ಥಿತಿ. ಅದಕ್ಕೆ ಗಂಡು, ಹೆಣ್ಣೆಂಬ ಭೇದವಿಲ್ಲ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅಭಿಪ್ರಾಯ ಪಟ್ಟಿದ್ದಾರೆ. ಅವೇಕ್ ಸಂಸ್ಥೆ, ಬೆಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಆಯೋಜಿಸಿದ್ದ 20 ದಿನಗಳ ಆಭರಣ ಪೆಟ್ಟಿಗೆಗಳ ತಯಾರಿಕೆ ಕೌಶಲ್ಯ ಅಭಿವೃದ್ಧಿ ಶಿಬಿರ ಹಾಗೂ 12 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಅವೇಕ್‌ನ ಅಧ್ಯಕ್ಷೆ ಜ್ಯೋತಿ ಬಾಲಕೃಷ್ಣ ಮಾತನಾಡಿ, ನಿಮ್ಮ ಅಗತ್ಯಗಳನ್ನು ನೀವು ಕೇಳಿದಾಗ ಮಾತ್ರ ಅದು ನಿಮಗೆ ದೊರೆಯುತ್ತದೆ. ಮಗು ಅಳದಿದ್ದರೆ ತಾಯಿ ಹಾಲೂಡಿಸುವುದಿಲ್ಲ. ಅದರಂತೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಾಗ ಮಾತ್ರ ಯಾವುದೇ ಉದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಎಚ್.ಆರ್.ರಾಜಪ್ಪ, ಉಪನಿರ್ದೇಶಕ ಸತ್ಯನಾರಾಯಣಟ್, ಅವೇಕ್‌ನ ತರಬೇತಿ ಮುಖ್ಯಸ್ಥೆ ಜಗದೀಶ್ವರಿ, ಜಿಲ್ಲಾ ಚಟುವಟಿಕೆಗಳ ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್, ಮುಖ್ಯ ತರಬೇತುದಾರರಾದ ಸದಾಶಿವ್, ಜ್ಯುವಲ್ಲರಿ ಕ್ಲಸ್ಟರ್‌ನ ಅಧ್ಯಕ್ಷ ಸೆಂತಿಲ್ ವೇಲನ್ ಉಪಸ್ಥಿತರಿದ್ದರು.

ಮೇ ಅಂತ್ಯದೊಳಗೆ ಕುದ್ರಿಗಿ ತೂಗು ಸೇತುವೆ ಸಂಚಾರ ಮುಕ್ತ ಹೊನ್ನಾವರ, ಎ.27: ತಾಲೂಕಿನ ಕುದ್ರಿಗಿ ಮತ್ತು ಉಪ್ರೋ ಗ್ರಾಪಂ ವ್ಯಾಪ್ತಿಯಲ್ಲಿ ಗೇರುಸೋಪ್ಪರಾಜ್ಯ ಹೆದ್ದಾರಿಗೆ ಸೇರಿಕೊಳ್ಳುವ ಶರಾವತಿ ನದಿಯ ಎಡ-ಬಲ ದಂಡೆಯ ಸಂಪರ್ಕದ ತೂಗು ಸೇತುವೆ ಕಾಮಗಾರಿ ಕಳೆದ ನವೆಂಬರ್ ತಿಂಗಳಲ್ಲಿ ಆರಂಭವಾಗಿದ್ದು ಬರುವ ಮೇ ಅಂತ್ಯದೊಳಗೆ ತೂಗು ಸೇತುವೆ ಸಂಚಾರ ಆರಂಭವಾಗಲಿದೆ ಎಂದು ರಾಜ್ಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ತಿಳಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರಿಗೆ ಕೊಟ್ಟ ಆಶ್ವಾಸನೆಯಂತೆ ಅವರ ಪ್ರಾಧಿಕಾರದಿಂದ ತೂಗು ಸೇತುವೆಯ ಕಾಮಗಾರಿ ಅತ್ಯಂತ ಶೀಘ್ರಗತಿಯಲ್ಲಿ ಸಾಗಿದ್ದು ಕಳೆದ ಆರು ತಿಂಗಳಲ್ಲಿ ಮೂರನೆ ಬಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

 ಕಳೆದ ಆರು ತಿಂಗಳಿಂದ ಸ್ಥಳದಲ್ಲಿಯೇ ಕಾರ್ಮಿಕರ ಶೆಡ್‌ನಲ್ಲಿ ವಾಸ್ತವ್ಯ ಹೂಡಿ ಕಾರ್ಮಿಕರೊಂದಿಗೆ ಬೆರೆತು ಕಾರ್ಯನಿರ್ವಹಿಸುತ್ತಿರುವ ಭಾರತ ಸೇತು ನಿರ್ಮಾಣ ಪ್ರತಿಷ್ಠಾನದ ಅಧ್ಯಕ್ಷ ಬಿ. ಗಿರೀಶ್ ಭಾರಧ್ವಜ್‌ರವರ ಕಾರ್ಯಕ್ಷಮತೆಯನ್ನು ನಿವೇದಿತ್ ಆಳ್ವ ಕೊಂಡಾಡಿದರು.

       ಶರಾವತಿ ಎಡ-ಬಲ ದಂಡೆಯ ಕುದ್ರಗಿ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಅತೀ ಉಪಯುಕ್ತವಾದ ಈ ಸೇತುವೆ 260 ಮೀಟರ್ ಉದ್ದದ ಸುಮಾರು 2 ಕೋಟಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಸೇತುವೆಯ ಎರಡು ಕಡೆಗೆ 10ಅಡಿ ಅಗಲದ ಸುಮಾರು 90 ಅಡಿ ಎತ್ತರದ ಎರಡು ಪಿಲ್ಲರ್‌ಗಳು ಮತ್ತು ಅದಕ್ಕೆ ಜೋಡಣೆಯಾಗಿ 25 ಅಡಿ ಉದ್ದದ 5 ಪಿಲ್ಲರ್‌ಗಳು ಕಾರ್ಯಪೂರ್ಣಗೊಂಡಿದೆ. ಕೇವಲ ತೂಗು ಸೇತುವೆಯ ರೋಪ್‌ಗಳನ್ನು ಜೋಡಿಸುವ ಕಾರ್ಯಮಾತ್ರ ಬಾಕಿಯಿದ್ದು ಮೇ ಮಧ್ಯಭಾಗ ಇಲ್ಲವೇ ಅಂತ್ಯದೊಳಗೆ ಕುದ್ರಿಗಿ ತೂಗು ಸೇತುವೆ ಸಂಚಾರ ಮುಕ್ತಗೊಳ್ಳಲಿದೆ ಎಂದು ಭಾರತ ಸೇತು ನೀರ್ಮಾಣ ಪ್ರತಿಷ್ಠಾನದ ಅಧ್ಯಕ್ಷ ಬಿ. ಗಿರೀಶ್ ಭಾರದ್ವಾಜ್ ನಿವೇದಿತ್ ಆಳ್ವರವರಿಗೆ ಸಂಪೂರ್ಣ ಮಾಹಿತಿ ನೀಡಿದರು.

 ಈ ಸಂದರ್ಭದಲ್ಲಿ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಹರ್ಷಕುಮಾರ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಪುರಂದರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ್.ಎನ್.ತೆಂಗೇರಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ , ಕುದ್ರಿಗಿ ಗ್ರಾಪಂ ಅಧ್ಯಕ್ಷ ಈಶ್ವರ್ ನಾಯ್ಕ, ತಾಪಂ ಸದಸ್ಯ ಉಲ್ಲಾಸ ನಾಯ್ಕ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News