ಜಿಪಂ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಯೋಜನೆ ಸಿದ್ಧ: ಇಂಜಿನಿಯರ್ ರಾಜ್‌ಕುಮಾರ್
ಮಡಿಕೇರಿ, ಎ.27: ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧ್ದತೆ ನಡೆದಿದೆ ಎಂದು ಇಂಜಿನಿಯರ್ ರಾಜ್‌ಕುಮಾರ್ ಹೇಳಿದ್ದಾರೆ. ಹಾಗೆಯೇ ಸಣ್ಣ ನೀರಾವರಿ ಇಲಾಖಾ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 22 ಕೆರೆಗಳಿದ್ದು, ಮಲೆನಾಡು ಪ್ರದೇಶವಾಗಿರುವುದರಿಂದ ಕೆರೆಗಳಿಗೆ ನೀರು ತುಂಬಿಸುವುದು ಕಷ್ಟಸಾಧ್ಯ. ಮಳೆಗಾಲದಲ್ಲಿ ಕೆರೆಗಳು ಸದಾ ತುಂಬಿರುತ್ತಿದ್ದು, ಬೇಸಿಗೆಯಲ್ಲಿ ಅಷ್ಟಾಗಿ ನೀರು ಇರುವುದಿಲ್ಲ. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗದಂತೆ ಅಂತರ್ಜಲ ಮಟ್ಟ ಹೆಚ್ಚಿಸುವುದು, ಕುಡಿಯುವ ನೀರು ಸದಾ ದೊರೆಯುವಂತೆ ನೋಡಿಕೊಳ್ಳುವುದು, ಜಾನುವಾರುಗಳಿಗೆ ಮೇವು ಒದಗಿಸುವುದು, ಮತ್ತಿತರ ಸಂಬಂಧ ಕಾರ್ಯಕ್ರಮ ರೂಪಿಸುವುದು ಅತ್ಯಗತ್ಯವಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಬೃಹತ್ ನೀರಾವರಿ ಇಲಾಖಾ ವ್ಯಾಪ್ತಿಯ ದಂಡಿಯಮ್ಮನ ಕೆರೆ(ಹೆಗ್ಗಡಹಳ್ಳಿ), ಕಲ್ಕೆರೆ(ರಾಮಾಪುರ), ಕೋಣನಕೆರೆ(ಹುಣಸೆ), ಮರೂರು ಕೆರೆ(ಹೆಬ್ಬಾಲೆ), ದಾಸೇಗೌಡನ ಕೆರೆ(ಹಳೇ ಕೋಟೆ), ಎರೆಕಟ್ಟೆ(ಮಣಜೂರು), ತೆಂಕನಕಟ್ಟೆ(ನಲ್ಲೂರು), ಗರಿಕೆ ಕೆರೆ(ತೊರೆನೂರು), ಗರಿಕೆ ಕಟ್ಟೆ(ಚಿಕ್ಕನಾಯಕನಹಳ್ಳಿ) ಕೆರೆಗಳು ಬರಲಿದ್ದು, ಈ ಕೆರೆಗಳಲ್ಲಿ ನೀರು ಸದಾ ತುಂಬಿರುವಂತೆ ನೋಡಿಕೊಳ್ಳುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಣ್ಣ ನೀರಾವರಿ ಇಲಾಖಾ ವ್ಯಾಪ್ತಿಯಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ 16, ವೀರಾಜಪೇಟೆ ತಾಲೂಕಿನಲ್ಲಿ 6 ಕೆರೆಗಳಿವೆ. ಹಾಗೆಯೇ ಜಿಪಂ ವ್ಯಾಪ್ತಿಯಲ್ಲಿ 680 ಕೆರೆಗಳಿದ್ದು, ಮಡಿಕೇರಿ ತಾಲೂಕಿನಲ್ಲಿ 57, ವೀರಾಜಪೇಟೆ ತಾಲೂಕಿನಲ್ಲಿ 293, ಸೋಮವಾರಪೇಟೆ ತಾಲೂಕಿನಲ್ಲಿ 330 ಕೆರೆಗಳಿವೆ. ಈ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿರುವುದು ಅತ್ಯಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶ ಕ್ಷೀಣಿಸುತ್ತಿದೆ. ಹಾಗೆಯೇ ಶುಂಠಿ ಬೆಳೆಯುವ ಪ್ರದೇಶ ವಿಸ್ತೀರ್ಣವಾಗುತ್ತಿದೆ. ಹೀಗೆ ಹಲವು ಕಾರಣಗಳಿಂದ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಹೋಗಿದೆ. ಭತ್ತ ಬೆಳೆಯಲು ಪ್ರೋತ್ಸಾಹ ನೀಡುವುದರ ಜೊತೆಗೆ ಇರುವ ಕೆರೆಗಳನ್ನು ಉಳಿಸಿಕೊಂಡು ಅಂತರ್ಜಲ ಮಟ್ಟ ಹೆಚ್ಚಿಸಲು ಕಾರ್ಯಕ್ರಮ ರೂಪಿಸುವುದು ಅತ್ಯಗತ್ಯವಾಗಿದೆ ಎಂದು ರಾಜ್ ಕುಮಾರ್ ಹೇಳಿದ್ದಾರೆ.