×
Ad

ಮೂಡಿಗೆರೆ: 98 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

Update: 2016-04-27 22:14 IST

 ಮೂಡಿಗೆರೆ,ಎ.27: ತಾಲೂಕಿನ 150 ಗ್ರಾಮಗಳ ಪೈಕಿ 98 ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲದೇ ಗಂಭೀರ ಪರಿಸ್ಥಿತಿ ಇದೆ. 22 ಗ್ರಾಮಗಳಲ್ಲಿ ಬಾವಿಗಳು, ಕೆರೆ, ಕಟ್ಟೆಗಳು, ಸಂಪೂರ್ಣ ಬತ್ತಿವೆ. ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ತುರ್ತು ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು, ಬುಧವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ಬರ ಪರಿಸ್ಥಿತಿ ಮತ್ತು ಕುಡಿಯುವ ನೀರಿನ ಬಗ್ಗೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಬರ ಪರಿಹಾರಕ್ಕಾಗಿ ಸ್ಪೆಷಲ್ ಟಾಸ್ಕ್‌ಪೋರ್ಸ್‌ನಲ್ಲಿ 80 ಲಕ್ಷ ರೂ.ಗಳ ಹಣಕಾಸಿನ ನೆರವನ್ನು ನೀಡಲಾಗಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಲು ಅಧಿಕಾರಿಗಳು ವಿಫಲವಾಗಿದ್ದಾರೆ. ತುರ್ತು ಕುಡಿಯುವ ನೀರು ಕಾಮಗಾರಿಗೆ ಹೆಚ್ಚುವರಿ ಅನುದಾನ ಬೇಕಿದ್ದಲ್ಲಿ ಜಿಲ್ಲಾಧಿಕಾರಿ ಅಥವಾ ಜಿಪಂ ಸಿಇಒ ಮೂಲಕ ಹೇಳಿ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.

  ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಕೆಲವು ಕಾಮಗಾರಿಗಳನ್ನು ಮುಗಿಸಲು ಇಂಜಿನಿಯರ್‌ಗಳು ಮುಂದಾಗಿಲ್ಲ, ಇನ್ನು ಕೆಲವು ಕಾಮಗಾರಿಗಳನ್ನು 5 ವರ್ಷಗಳಿಂದ ಪೂರ್ತಿಗೊಳಿಸಿಲ್ಲ. ವಿವಿಧ ಕಾಮಗಾರಿಗಳ ಕುರಿತು ಮೆಸ್ಕಾಂ ಅಧಿಕಾರಿಗಳು ಸರಿಯಾದ ಮಾಹಿತಿ ಒದಗಿಸದೇ ನುಣುಚಿಕೊಳ್ಳುವ ಪ್ರಯತ್ನ ನಡೆಸಿದರು. ಈ ವಿಷಯ ತಿಳಿದ ಸಚಿವರು, ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಮೆಸ್ಕಾಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪಪಂ ನಿಂದ ಮಗ್ಗಲಮಕ್ಕಿಗೆ ನೀರಿನ ವ್ಯವಸ್ಥೆ ಇದೆ. ಅನಧಿಕೃತ ನಲ್ಲಿಗಳನ್ನು ತೆಗೆದುಹಾಕುವಂತೆ ಪಿಡಿಒಗೆ ಆದೇಶ ನೀಡಿದ ಸಚಿವರು, ಕುದುರೆಮುಖದಲ್ಲಿ ಗಿರಿಜನರು ಮೀನು ಹಿಡಿದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೇಸು ಹಾಕಿ ಜೈಲಿಗೆ ಕಳಿಸಿರುವ ಕಾರಣ ಅಲ್ಲಿನ ಡಿಎಫ್‌ಒರವರನ್ನು ಸಚಿವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

1972ರಿಂದ ಈ ರೀತಿಯ ಬರಗಾಲವನ್ನು ಮಲೆನಾಡಿನ ಜನ ಕಂಡಿಲ್ಲ. ಆದ್ದರಿಂದ ಮಲೆನಾಡನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಬರ ಪರಿಸ್ಥಿತಿಯಿಂದ ಕಾಫಿ ಬೆಳೆಗಾರರಿಗೆ ಸಾಲ ಮರುಪಾವತಿ ಸಾಧ್ಯವಾಗುತ್ತಿಲ್ಲ. ಸಾಲ ಮನ್ನಾ ಮಾಡಬೇಕು. ಅಕ್ರಮ-ಸಕ್ರಮದಲ್ಲಿ ಫಾರಂ ನಂ.53ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. - ಬಿಬಿ. ನಿಂಗಯ್ಯ, ಶಾಸಕರು

ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಪಣಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ನಡೆದ ಹಲವು ಚುನಾವಣೆಗಳಲ್ಲಿ ಜನರು ತಾಲೂಕಿನ ಕೆಲವು ಭಾಗಗಳಲ್ಲಿ ಚುನಾವಣಾ ಬಹಿಷ್ಕಾರ ಹಾಕಿದ್ದಾರೆ. ಇದಕ್ಕೆಲ್ಲ ಅಧಿಕಾರಿಗಳೇ ಹೊಣೆಗಾರರು. - ಡಾ. ಮೋಟಮ್ಮ, ಎಂಎಲ್ಸಿ ಕಡೂರು ತರೀಕೆರೆ ಬಯಲು ಸೀಮೆಭಾಗಕ್ಕೆ 25 ಮೆಘಾವ್ಯಾಟ್ ವಿದ್ಯುತ್ ನೀಡಲಾಗುತ್ತಿದೆ. ಮೂಡಿಗೆರೆ ತಾಲೂಕಿಗೆ ಕೇವಲ 2ಮೆ.ವ್ಯಾ. ವಿದ್ಯುತ್ ನೀಡಲಾಗುತ್ತಿದೆ. ಇದರಿಂದಾಗಿ ವಿದ್ಯುತ್ ಸಮಸ್ಯೆ ಹೇಳತೀರದಾಗಿದೆ. ಪ್ರಮಾಣ ಹೆಚ್ಚಿಸಲು ಅಧಿಕಾರಿಗಳಿಗೆ ತಿಳಿಸಿದರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

- ಎಂ.ಕೆ.ಪ್ರಾಣೇಶ್, ಎಂಎಲ್ಸಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News