×
Ad

ರಂಗ ಶಿಬಿರಗಳು ಮಕ್ಕಳ ಬೌದ್ಧಿಕ ವಿಕಸನಕ್ಕೆ ಸಹಕಾರಿ:ಇಕ್ಬಾಲ್ ಅಹ್ಮದ್

Update: 2016-04-27 22:15 IST

ಶಿಕಾರಿಪುರ,ಎ.27: ರಂಗ ಶಿಬಿರಗಳು ಮಕ್ಕಳ ಬೌದ್ಧಿಕ ವಿಕಸನಕ್ಕೆ ಅತ್ಯಂತ ಸಹಕಾರಿಯಾಗಿದೆ ಎಂದು ರಂಗಾಯಣದ ನಿರ್ದೇಶಕ ಇಕ್ಬಾಲ್ ಅಹ್ಮದ್ ತಿಳಿಸಿದ್ದಾರೆ.

ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳು ಕೇವಲ ಶಿಕ್ಷಣದಿಂದ ಮಾತ್ರ ಪರಿಪೂರ್ಣವಾಗಲು ಸಾಧ್ಯವಿಲ್ಲ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣಕ್ಕೆ ಸರಿಸಮಾನವಾಗಿ ಪಠ್ಯೇತರ ಚಟುವಟಿಕೆ ಮುಖ್ಯವಾಗಿದ್ದು, ರಂಗ ಶಿಬಿರ ಮಕ್ಕಳ ಬೌದ್ಧ್ದಿಕ ವಿಕಸನಕ್ಕೆ ಅತ್ಯಂತ ಪರಿಣಾಮಕಾರಿ ಶಿಬಿರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರಹಾಕುವಲ್ಲಿ ರಂಗಾಧ್ಯಯನದ ಪಾತ್ರ ಬಹು ಮಹತ್ವದ್ದಾಗಿದು,್ದ ಈ ಮೂಲಕ ಮಕ್ಕಳಲ್ಲಿನ ಶಕ್ತಿಯನ್ನು ಜಾಗೃತಗೊಳಿಸಬಹುದಾಗಿದೆ ಎಂದರು.

ವಿಶೇಷ ಆಹ್ವಾನಿತರಾಗಿ ದಕ್ಷಿಣ ಭಾರತದ ಚಲನಚಿತ್ರ ನಟ ಕಿಶೋರ್ ಮಾತನಾಡಿ, ಉತ್ತಮ ತರಬೇತಿಯ ಮೂಲಕ ಬಾಲ ಪ್ರತಿಭೆಗಳು ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಿ ರೂಪುಗೊಳ್ಳುವ ಸರ್ವ ಅವಕಾಶ ಕೇಂದ್ರದಲ್ಲಿ ಕಲ್ಪಿಸಲಾಗಿದ್ದು, ಶಿಬಿರಾರ್ಥಿಗಳಿಗೆ ಕೆಲವೇ ದಿನಗಳಲ್ಲಿನ ತರಬೇತಿ ಭವಿಷ್ಯದಲ್ಲಿನ ಅತ್ಯುತ್ತಮ ಕಲಾವಿದರ ಭರವಸೆಯನ್ನು ಹುಟ್ಟುಹಾಕಿದೆ ಎಂದರು.

ಗುಡಿ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಕೆ.ಎಸ್ ಹುಚ್ರಾಯಪ್ಪ ಮಾತನಾಡಿ, ಸರ್ವರ ಸಹಕಾರ ಸಾಂಸ್ಕೃತಿಕ ಕೇಂದ್ರದ ಬಹು ದೊಡ್ಡ ಶಕ್ತಿಯಾಗಿದ್ದು, ತಾಲೂಕಿನಲ್ಲಿನ ಉತ್ತಮ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಆರಂಭಿಸಲಾದ ಕೇಂದ್ರಕ್ಕೆ ಆರ್‌ಎಲ್‌ಡಿಐವಿ ಟ್ರಸ್ಟ್ ವತಿಯಿಂದ ಸೊರಬದ ಕುಮಾರ್ ರಂಗವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದ ಅವರು, ಪಟ್ಟಣದಲ್ಲಿ ವೃದ್ಧಾಶ್ರಮ ಹಾಗೂ ಸೊರಬದಲ್ಲಿನ ಸ್ವಗೃಹವನ್ನು ಅನಾಥಾಶ್ರಮಕ್ಕೆ ದಾನವಾಗಿ ನೀಡುವ ದೃಢ ನಿರ್ಧಾರದ ಜೊತೆಗೆ ಸ್ಮಶಾನದ ಅಭಿವೃದ್ಧಿ ಮೂಲಕ ಸದೃಢ ಸಮಾಜ ನಿರ್ಮಾಣದ ಬಹು ದೊಡ್ಡ ಕನಸನ್ನು ಹೊಂದಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಹೊಸನಗರ ತಶೀಲ್ದಾರ್ ಪಟ್ಟರಾಜಗೌಡ, ಗುಡಿ ಸಾಂಸ್ಕೃತಿಕ ಕೇಂದ್ರದ ಕಾಳಿಂಗರಾವ್,ಮಂಜುನಾಥ ಶಿಂಧೆ,ಗಿರೀಶ ಕಳಾರಿ,ನಾಗರಾಜ್,ಭರತ್, ಸುಜಿತ್, ರಂಜಿತಾ,ಶಾಂತಮ್ಮ,ಹಿನ್ನಲೆ ಗಾಯಕಿ ಶಕಿಲಾಬಾಯಿ ಸಹೋದರರು,ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News