ಶಿವಮೊಗ್ಗ ಬಿಜೆಪಿಯಲ್ಲಿ ಬದಲಾವಣೆಯ ಪರ್ವ ಆರಂಭ
ಬಿ. ರೇಣುಕೇಶ್
ಶಿವಮೊಗ್ಗ,ಎ.27: ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಿಯೋಜಿತರಾಗುತ್ತಿದ್ದಂತೆ ತವರೂರು ಶಿವಮೊಗ್ಗ ಬಿಜೆಪಿ ಪಾಳೇಯದಲ್ಲಿ ಬದಲಾವಣೆಯ ಪರ್ವ ಆರಂಭವಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಪಕ್ಷದಲ್ಲಿರುವ ವಿರೋಧಿ ಪಾಳೇಯಕ್ಕೆ ಟಾಂಗ್ ನೀಡಲು ಬಿಎಸ್‌ವೈ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಇಷ್ಟರಲ್ಲಿಯೇ ಜಿಲ್ಲಾ ಬಿಜೆಪಿಗೆ ಹೊಸ ಸಾರಥಿಯ ನಿಯೋಜನೆಯಾಗುವ ಸಾಧ್ಯತೆಯಿದೆ. ಪಕ್ಷದ ಸಾಂಸ್ಥಿಕ ಘಟಕದಲ್ಲಿ ಭಾರೀ ಬದಲಾವಣೆಯ ನಿರೀಕ್ಷೆಯಿದೆ. ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ತಮ್ಮ ಹಿಡಿತ ಸಾಧಿಸಲು ಮುಂದಾಗಿರುವ ಬಿಎಸ್‌ವೈ, ಈ ನಿಟ್ಟಿನಲ್ಲಿ ಜಿಲ್ಲಾ ಘಟಕದಲ್ಲಿ ತಮ್ಮ ಆಪ್ತರಿಗಷ್ಟೆ ಮಣೆ ಹಾಕಲು ನಿರ್ಧರಿಸಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ತಮ್ಮ ಆಪ್ತರೊಂದಿಗೆ ಗುಪ್ತ ಸಮಾಲೋಚನೆ ಕೂಡ ನಡೆಸಿದ್ದಾರೆ. ಈ ಮೂಲಕ ಪಕ್ಷದಲ್ಲಿರುವ ತಮ್ಮ ವಿರೋಧಿಗಳಿಗೆ ತಕ್ಕ ತಿರುಗೇಟು ನೀಡುವ ಯೋಜನೆ ರೂಪಿಸಿದ್ದಾರೆ ಎಂದು ಬಿಎಸ್‌ವೈ ಆಪ್ತ ಮೂಲಗಳು ತಿಳಿಸಿವೆ. ಲಭ್ಯ ಮಾಹಿತಿಯ ಪ್ರಕಾರ, ತಮ್ಮ ಬಲಗೈ ಬಂಟರಾದ ಎಸ್.ರುದ್ರೇಗೌಡ ಅಥವಾ ಎಸ್.ಎಸ್.ಜ್ಯೋತಿಪ್ರಕಾಶ್‌ರವರಲ್ಲಿ ಓರ್ವರನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಯೋಜನೆ ಮಾಡಲು ಬಿಎಸ್‌ವೈ ತೀರ್ಮಾನಿಸಿದ್ದಾರೆ. ಹಾಗೆಯೇ ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಆಪ್ತರನ್ನು ನಿಯೋಜನೆ ಮಾಡುವ ಚಿಂತನೆ ನಡೆಸಿದ್ದು, ಯಾವ ಹುದ್ದೆಗಳಿಗೆ ಯಾರನ್ನು ನೇಮಕ ಮಾಡಬೇಕು ಎಂಬುದರ ಪಟ್ಟಿ ಸಿದ್ಧಪಡಿಸಿ ಕೊಡುವಂತೆ ಸೂಚನೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.