ವಿವಿಧ ಗ್ರಾಮಗಳಿಗೆ ಸಚಿವ ದೇಶಪಾಂಡೆ ಭೇಟಿ
ಕಾರವಾರ, ಎ.27: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಬುಧವಾರ ಕಾರವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ಬೆಳಗ್ಗೆ ಮುಕೇರಿ, ಹಳೆಕೋಟೆ, ಕಡವಾಡ, ಶಿರವಾಡ ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು, ಕುಡಿಯುವ ನೀರನ್ನು ಸಮರ್ಪಕವಾಗಿ ಪ್ರತಿನಿತ್ಯ ಟ್ಯಾಂಕರ್ ಮೂಲಕ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ಕುಟುಂಬಕ್ಕೆ ಕೇವಲ ಐದು ಕೊಡ ನೀರು ನೀಡುತ್ತಿದ್ದು, ಸಾಕಾಗುತ್ತಿಲ್ಲ ಎಂಬ ಗ್ರಾಮಸ್ಥರ ದೂರಿಗೆ ಸ್ಪಂದಿಸಿದ ಅವರು, ಪ್ರತಿದಿನ ಕುಟುಂಬಕ್ಕೆ 12 ಕೊಡ ನೀರನ್ನು ಒದಗಿಸಬೇಕು. ಕುಡಿಯುವ ನೀರಿಗೆ ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಗ್ರಾಮದಲ್ಲಿರುವ ಎಲ್ಲ ಬೋರ್‌ವೆಲ್ ಹಾಗೂ ಬಾವಿಗಳನ್ನು ಪರಿಶೀಲಿಸಿ, ನೀರಿನ ಲಭ್ಯತೆಯನ್ನು ಹೆಚ್ಚು ಮಾಡುವ ಸಾಧ್ಯವಿದೆಯೇ ಎಂದು ಪರಿಶೀಲಿಸಬೇಕು. ಬೋರ್‌ವೆಲ್‌ಗಳನ್ನು ಫ್ಲಶ್ ಮಾಡಬೇಕು. ಬಾವಿಯನ್ನು ಶುದ್ಧೀಕರಿಸಬೇಕು. ಹೊಸದಾಗಿ ಕೊರೆಯಲಾಗಿರುವ ಬೋರ್‌ವೆಲ್‌ಗೆ ಪಂಪ್ ಹಾಗೂ ನೀರು ಪೂರೈಕೆಗೆ ಪೈಪ್‌ಲೈನ್ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ನೀರಿನ ಸಮಸ್ಯೆ ಇದ್ದರೆ ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು. ಕಳೆದ ಹಲವು ದಶಕಗಳಲ್ಲೇ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ತೀವ್ರ ಬರಪರಿಸ್ಥಿತಿ ಉಂಟಾಗಿದ್ದು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.
ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಸಹಾಯಕ ಆಯುಕ್ತ ಪ್ರಶಾಂತ್ ಕುಮಾರ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.