×
Ad

3 ವರ್ಷಗಳಲ್ಲಿ 168 ಕೋಟಿ ರೂ. ಕಾಮಗಾರಿ:ಕೆ.ಎಂ.ಮಹೇಶ್ವರಪ್ಪ

Update: 2016-04-27 22:23 IST

ಕಡೂರು, ಎ.27: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 168 ಕೋಟಿ ರೂ. ಕಾಮಗಾರಿಗಳು ನಡೆದಿವೆ ಎಂದು ಜೆ.ಡಿ.ಎಸ್ ಕಡೂರು ತಾಲೂಕು ಅಧ್ಯಕ್ಷ ಕೆ.ಎಂ.ಮಹೇಶ್ವರಪ್ಪ ತಿಳಿಸಿದ್ದಾರೆ.

  ಅವರು ಪಟ್ಟಣದ ಜೆಡಿಎಸ್ ಪಕ್ಕದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಹೆದ್ದಾರಿ ಹಿರೇನಲ್ಲೂರು ರಸ್ತೆ ಮತ್ತು ಮರವಂಜಿ ರಸ್ತೆಗಳ ಕಾಮಗಾರಿಗೆ 36 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗಿ ಸುಂದರವಾದ ರಸ್ತೆ ನಿರ್ಮಾಣವಾಗಲಿದೆ. ಬಿ.ವೈ.ಎಸ್.ಎಸ್ ರಸ್ತೆ ಕಾಮಗಾರಿಗೆ ಸಿ.ಆರ್.ಎಂ. ಯೋಜನೆಯಡಿ 15 ಕೋಟಿ ರೂ. ಪ್ರಸ್ತಾವನೆ ಸರಕಾರದ ಮುಂದಿದೆ. ಈಗಾಗಲೇ 3 ಕೋಟಿ ರೂ. ರಸ್ತೆ ಕಾಮಗಾರಿಯು ಮುಗಿದಿದೆ ಎಂದರು.

   ಎಂ.ಡಿ.ಆರ್. ಯೋಜನೆಯಡಿ ಗಿರಿಯಾಪುರದಿಂದ ಚಿಕ್ಕಬಳ್ಳೇಕೆರೆ ರಸ್ತೆ ಕಾಮಗಾರಿಗೆ ಸುಮಾರು 3.50 ಕೋಟಿ ರೂ. ಮಂಜೂರಾಗಿದೆ. ತಾಲೂಕಿನ ಚಟ್ನಳ್ಳಿ ಗ್ರಾಮದ ಸಮುದಾಯ ಭವನಕ್ಕೆ ಶಾಸಕರ ಅನುದಾನದಲ್ಲಿ 6 ಲಕ್ಷ ರೂ., ಅದೇ ಗ್ರಾಮದ ಪ್ರೌಢಶಾಲೆಗೆ 4 ಲಕ್ಷ ರೂ., ಚಟ್ನಳ್ಳಿ ಆಲಘಟ್ಟ ತಾಂಡ್ಯಕ್ಕೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ 24 ಲಕ್ಷ ರೂ., ಸುವರ್ಣ ಗ್ರಾಮ ಯೋಜನೆಗೆ 36 ಲಕ್ಷ ರೂ. ಹಾಗೂ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 8 ಲಕ್ಷ ರೂ. ಅನುದಾನ ನೀಡಲಾಗಿದೆ. ಶಾಸಕ ದತ್ತರವರ ಮೂರು ವರ್ಷಗಳ ಅವಧಿಯಲ್ಲಿ ಚಟ್ನಳ್ಳಿ ಗ್ರಾಮವೊಂದಕ್ಕೆ ಸುಮಾರು 82 ಲಕ್ಷ ರೂ. ಅನುದಾನ ನೀಡಲಾಗಿದೆ. ಹಿಂದಿನ ಯಾವುದೇ ಶಾಸಕರು ಈ ಗ್ರಾಮಕ್ಕೆ ಅನುದಾನವನ್ನು ನೀಡಿರುವುದಿಲ್ಲ ಎಂದು ತಿಳಿಸಿದರು.

 ಜೆಡಿಎಸ್ ನಗರ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪುರಸಭೆಯನ್ನು ಹೊರತು ಪಡಿಸಿ ಭದ್ರಾ ಡ್ಯಾಂ ನಿಂದ ಕುಡಿಯುವ ನೀರನ್ನು ತರುವ ಯೋಜನೆಯಲ್ಲಿ ಎಲ್ಲ ವಾರ್ಡ್‌ಗಳಿಗೆ ವಿತರಿಸಲು ಪೈಪ್‌ಲೈನ್ ಅಳವಡಿಸಲು ಈಗಾಗಲೇ 60 ಲಕ್ಷ ರೂ. ಅನುದಾನ ಟಾಸ್ಕ್ ಫೆೆರ್ಸ್‌ನಡಿ ಬಿಡುಗಡೆಯಾಗಿದೆ. ಮುಖ್ಯಮಂತ್ರಿಗಳ 50 ಲಕ್ಷ ರೂ. ಅನುದಾನ ಮಂಜೂರಾಗಿದೆ. ಈ ಹಣದಲ್ಲಿ ಡಾ.ವೈ.ಸಿ.ವಿಶ್ವನಾಥ್ ಮನೆಯಿಂದ ಚೆಕ್ ಪೋಸ್ಟ್‌ವರೆಗೆ ಜೋಡಿರಸ್ತೆ, ವಿದ್ಯುತ್ ದೀಪ ಅಳವಡಿಸಲು 15 ಲಕ್ಷ ರೂ., ರೈಲ್ವೆ ಟ್ರ್ಯಾಕ್‌ನಿಂದ ಕೆನರಾ ಬ್ಯಾಂಕ್‌ವರೆಗೆ ಬಾಕ್ಸ್ ಚರಂಡಿ ನಿರ್ಮಾಣಕ್ಕೆ 20 ಲಕ್ಷ ರೂ. ಹಾಗೂ 15 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಬನ್ನಿಮರದ ರಸ್ತೆಯಿಂದ ಸುವರೆಹೊಳ್ಳದವರೆಗೆ ರಸ್ತೆ ನಿರ್ಮಾಣವಾಗಲಿದೆ. ಈ ಕಾಮಗಾರಿಗಳನ್ನು ಯಾವುದಾದರೂ ಏಜೆನ್ಸಿ ಮೂಲಕ ಮಾಡಿಸಲು ಶಾಸಕ ದತ್ತಾರವರು ಪತ್ರ ವ್ಯವಹಾರ ನಡೆಸಿದ್ದಾರೆ ಎಂದು ಹೇಳಿದರು.

ಜಿಪಂ ಸದಸ್ಯೆ ಕಾವೇರಿ ಲಕ್ಕಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸೀಗೆಹಡ್ಲು ಹರೀಶ, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಕಲ್ಲೇಶಪ್ಪ, ಚಟ್ನಳ್ಳಿ ಗ್ರಾಪಂ ಸದಸ್ಯ ಶಿವಕುಮಾರ್, ಯಳಗೊಂಡನಹಳ್ಳಿ ಈಶಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News