ಸುರಂಗ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ಕ್ಷಣಗಣನೆ

Update: 2016-04-27 17:42 GMT

ನಾಳೆ ಉದ್ಘಾಟನೆ; ಎ.30ರಿಂದ ಸಾರ್ವಜನಿಕ ಸೇವೆ ಆರಂಭ
ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚಾರ
 ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿಗೆ 40ರೂ. ದರ

ಬೆಂಗಳೂರು, ಎ.27: ಉದ್ಯಾನಗರಿ ಬೆಂಗಳೂರಿಗರ ಬಹುನಿರೀಕ್ಷೆಯ (ಪೂರ್ವ -ಪಶ್ಚಿಮ ಕಾರಿಡಾರ್) ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಾಯಂಡನಹಳ್ಳಿ ವರೆಗಿನ ‘ನಮ್ಮ ಮೆಟ್ರೋ’ ರೈಲು ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ.

ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಎ.29ರ ಸಂಜೆ 6ಗಂಟೆಗೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಲವು ಗಣ್ಯರು ಹಸಿರು ನಿಶಾನೆ ತೋರಿಸಲಿದ್ದಾರೆ.
ಎಂ.ಜಿ.ರಸ್ತೆಯಿಂದ ನಾಯಂಡನಹಳ್ಳಿ ವರೆಗಿನ 4.8 ಕಿ.ಮೀ ಉದ್ದದ ಜೋಡಿ ಸುರಂಗ ಮಾರ್ಗದಲ್ಲಿ ಕಡು ನೇರಳೆ ಬಣ್ಣದ ನಮ್ಮ ಮೆಟ್ರೋ ರೈಲು ಸಂಚಾರ ಎ.30ರಿಂದ ಸಾರ್ವಜನಿಕ ಸೇವೆಯನ್ನು ಆರಂಭಿಸಲಿದ್ದು, ಕೇವಲ 33 ನಿಮಿಷಗಳಲ್ಲಿ ಸುಮಾರು 18 ಕಿ.ಮೀ.ದೂರವನ್ನು ಕ್ರಮಿಸಲಿದೆ.
ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದ್ದು, ಬೆಳಗ್ಗೆ 6ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕ ಸೇವೆಗೆ ನಮ್ಮ ಮೆಟ್ರೋ ಸನ್ನದ್ಧವಾಗಿದೆ. ಬೈಯಪ್ಪನಹಳ್ಳಿಯಿಂದ ನಾಯಂಡನಹಳ್ಳಿ ವರೆಗಿನ 18 ಕಿ.ಮೀಗೆ ಪ್ರಯಾಣ ದರ 40 ರೂ.ಗಳನ್ನು ನಿಗದಿಪಡಿಸಲಾಗಿದೆ.
ಪ್ರಯಾಣ ದರ: ನಾಯಂಡಹಳ್ಳಿಯಿಂದ ದೀಪಾಂಜಲಿನಗರ-10ರೂ., ಅತ್ತಿಗುಪ್ಪೆ-13ರೂ., ವಿಜಯನಗರ-14ರೂ., ಹೊಸಹಳ್ಳಿ-16ರೂ., ಮಾಗಡಿ ರಸ್ತೆ-17ರೂ., ನಗರ ರೈಲ್ವೆ ನಿಲ್ದಾಣ-19ರೂ., ಮೆಜೆಸ್ಟಿಕ್ ಇಂಟರ್‌ಚೇಂಜ್-22ರೂ., ವಿಧಾನಸೌಧ-26ರೂ., ಕಬ್ಬನ್ ಪಾರ್ಕ್-28ರೂ., ಎಂ.ಜಿ.ರಸ್ತೆ-30 ರೂ., ಹಲಸೂರು-34 ಹಾಗೂ ಬೈಯಪ್ಪನಹಳ್ಳಿಗೆ 40 ರೂ.ದರ ನಿಗದಿಪಡಿಸಲಾಗಿದೆ.
ಅತ್ಯಾಧುನಿಕ ವ್ಯವಸ್ಥೆ: ಸುರಂಗ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚರಿಸಲಿದ್ದು, ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ರೈಲು ಆಕಸ್ಮಿಕವಾಗಿ ಕೆಟ್ಟು ನಿಂತರೆ-ಬೆಂಕಿ ಅವಘಡ ಸಂಭವಿಸಿದರೆ ಪ್ರಯಾಣಿಕರು ಆತಂಕ ಪಡಬೇಕಿಲ್ಲ.
ಸುರಂಗ ಮಾರ್ಗದ ಉದ್ದಕ್ಕೂ ನಿಲ್ದಾಣದ ಪ್ಲಾರ್ಟ್ ಫಾರ್ಮ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗ ನಿರ್ಮಿಸಲಾಗಿದೆ. ಎಲ್ಲ ನಿಲ್ದಾಣಗಳಲ್ಲಿಯೂ ಕುಡಿಯುವ ನೀರು ಮತ್ತು ಪುರುಷ, ಮಹಿಳೆ ಮತ್ತು ವಿಕಲಚೇತನರಿಗೆ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜ್ಯೋತ್ಸವಕ್ಕೆ ಪೂರ್ಣ: ಕಬ್ಬನ್ ಪಾರ್ಕಿನಿಂದ ಮಾಗಡಿ ರಸ್ತೆ ಸುರಂಗ ಮಾರ್ಗ ಕಾಮಗಾರಿ ವಿಳಂಬವಾಗಿದ್ದು, ಉತ್ತರ-ದಕ್ಷಿಣ ಕಾರಿಡಾರ್ ಸುರಂಗ ಮಾರ್ಗದ ಕೆಲಸವೂ ನಿಧಾನಗತಿಯಲ್ಲಿ ಸಾಗಿದೆ. ನವೆಂಬರ್ 1ರ ಕನ್ನಡ ರಾಜೋತ್ಸವದ ವೇಳೆ ನಮ್ಮ ಮೆಟ್ರೋ ಒಂದನೆ ಹಂತ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಪ್ರಯಾಣಿಕರು ಟೋಕನ್ ಬದಲಿಗೆ ಸ್ಮಾರ್ಟ್ ಕಾರ್ಡ್ ಖರೀದಿಸಿ ಸಂಚರಿಸಿದರೆ ಶೇ.15ರಷ್ಟು ರಿಯಾಯಿತಿ ದೊರೆಯಲಿದೆ. ಗುಂಪು ಟಿಕೆಟ್ ಖರೀದಿಗೆ ಶೇ.10ರಷ್ಟು ರಿಯಾಯಿತಿ ಸಿಗಲಿದೆ.
-ಪ್ರದೀಪ್ ಸಿಂಗ್ ಖರೋಲಾ, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News