ಬಿಎಸ್‌ವೈ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು
ಬೆಂಗಳೂರು, ಎ.27: ಟ್ರಸ್ಟ್ ಹೆಸರಿನಲ್ಲಿ ಸರಕಾರಿ ಭೂಮಿ ಕಬಳಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಹಾಗೂ ಹಿಂದಿನ ಜಿಲ್ಲಾಧಿಕಾರಿ ಅಯ್ಯಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ದೂರು ದಾಖಲಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಹನುಮೇಗೌಡ ಎಂಬವರು ನೀಡಿರುವ ದೂರಿನಲ್ಲಿ ಯಡಿಯೂರಪ್ಪ ಆಪ್ತರಾಗಿರುವ ಬಿ.ಜೆ.ಪುಟ್ಟಸ್ವಾಮಿ ಟ್ರಸ್ಟಿಯಾಗಿರುವ ವಿಶ್ವ ಗಾಣಿಗ ಟ್ರಸ್ಟ್‌ಗೆ ನಿಯಮಾವಳಿಗಳನ್ನು ಉಲ್ಲಂಘಿಸಿ ಸರಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದರು ಆರೋಪಿಸಲಾಗಿದೆ.
ನೋಂದಣಿಯಾಗಿ ಕನಿಷ್ಠ 3 ವರ್ಷವಾಗಿರುವ ಟ್ರಸ್ಟ್‌ಗೆ ಮಾತ್ರ ಸರಕಾರಿ ಭೂಮಿ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ವಿಶ್ವ ಗಾಣಿಗ ಟ್ರಸ್ಟ್ ನೋಂದಣಿಯಾದ 6 ತಿಂಗಳಲ್ಲೇ ಬೆೆಂಗಳೂರಿನ ತಾ.ದಾಸನಪುರದಲ್ಲಿ ಸುಮಾರು 40 ಕೋಟಿ ರೂ.ವೌಲ್ಯದ 10 ಎಕರೆ ಸರಕಾರಿ ಗೋಮಾಳದ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ವಿಶ್ವ ಗಾಣಿಗ ಟ್ರಸ್ಟ್ ನೋಂದಣಿಯಾಗಿದ್ದು 2011ರ ಮಾ.24ರಂದು. ಆದರೆ, 2011ನೆ ಸಾಲಿನ ಫೆ.24ರಂದು ಮಂಡನೆ ಮಾಡಿದ ಬಜೆಟ್‌ನಲ್ಲಿ ಯಡಿಯೂರಪ್ಪ ಗಾಣಿಗ ಗುರುಪೀಠ ಸ್ಥಾಪನೆಗೆ 5 ಕೋಟಿ ರೂ.ಘೋಷಣೆ ಮಾಡಿದ್ದರು. ಈ ಪ್ರಕರಣದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ಟ್ರಸ್ಟ್‌ಗೆ ಸರಕಾರಿ ಭೂಮಿ ಮಂಜೂರು ಮಾಡಿರುವುದು ಹಾಗೂ ನೋಂದಣಿಯಾಗುವ ಮುನ್ನವೇ ಟ್ರಸ್ಟ್‌ಗೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿರುವ ಸಂಬಂಧ ಕಾನೂನು ರೀತಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹನುಮೇಗೌಡ ಕೋರಿದ್ದಾರೆ.