ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ತುರ್ತು ನೋಟಿಸ್
ಬೆಂಗಳೂರು,ಎ.27: ಸಿನಿರಸಿಕರನ್ನು ಬೆಚ್ಚಿಬೀಳಿಸಿದ್ದ ದಂಡುಪಾಳ್ಯ ಚಿತ್ರದ ಮುಂದುರಿದ ಭಾಗವಾದ ದಂಡುಪಾಳ್ಯ-2 ಚಿತ್ರ ಬಿಡುಗಡೆಗೆ ತಡೆಕೋರಿ ಜೈಲಿನಲ್ಲಿರುವ 6 ಮಂದಿ ಕೈದಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಬುಧವಾರ ತುರ್ತು ನೋಟಿಸ್ ಜಾರಿ ಮಾಡಿದೆ. ದಂಡುಪಾಳ್ಯ-2 ಚಿತ್ರದ ಬಿಡುಗಡೆಗೆ ತಡೆಕೋರಿ ಅರ್ಜಿ ಸಲ್ಲಿಸಿರುವ 6 ಮಂದಿ ಕೈದಿಗಳು ನಮ್ಮ ಮೇಲಿರುವ ಪ್ರಕರಣಗಳ ಕುರಿತ ವಿಚಾರಣೆ ಕೋರ್ಟ್‌ನಲ್ಲಿ ಬಾಕಿಯಿದೆ. ಈ ಚಿತ್ರ ನೈಜ ಘಟನೆ ಆಧರಿಸಿದ ಚಿತ್ರವೆಂದು ಹೇಳಲಾಗುತ್ತಿದೆ. ಆದರೆ ತಮ್ಮ ಬದುಕಿನ ಘಟನೆ ಕುರಿತು ನಮ್ಮಿಂದ ಯಾವುದೇ ಹೇಳಿಕೆ ಪಡೆದಿಲ್ಲ. ತಮ್ಮ ಅನುಮತಿ ಪಡೆಯದೆ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಬುಧವಾರ ವಿಚಾರಣೆ ನಡೆಸಿದ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಚಿತ್ರದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಎ.30ಕ್ಕೆ ಮುಂದೂಡಿದೆ.