‘ಹಿಂಗಾರು ಹಂಗಾಮು’ 2.16 ಲಕ್ಷ ಹೆಕ್ಟೇರ್ ಬೆಳೆ ಹಾನಿ
ಗದಗ, ಎ.27: 2015-16ನೆ ಸಾಲಿನ ಮುಂಗಾರಿನಲ್ಲಿ ಸರಾಸರಿ ಶೇ.36 ಹಾಗೂ ಹಿಂಗಾರಿನಲ್ಲಿ ಸರಾಸರಿ ಶೇ.48ರಷ್ಟು ಮಳೆ ಕೊರತೆಯಿಂದ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ 1.69 ಲಕ್ಷ ಹೆಕ್ಟೆರ್ ಪೈಕಿ 1.52 ಲಕ್ಷ ಹೆಕ್ಟೆರ್ ಹಾಗೂ ಹಿಂಗಾರಿನಲ್ಲಿ ಬಿತ್ತನೆಯಾಗಿದ್ದ 2.91 ಲಕ್ಷ ಹೆಕ್ಟೆರ್ ಪೈಕಿ 2.16 ಲಕ್ಷ ಹೆಕ್ಟೆರ್ ಬೆಳೆಹಾನಿಯಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ಒದಗಿಸಿದ್ದಾರೆ.
ಬುಧವಾರ ಗದಗ ಜಿಲ್ಲೆಯ ಲಕ್ಕುಂಡಿ, ತಿಮ್ಮಾಪುರ, ಮಾಗಡಿ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಂಡಿರುವ ಕುರಿತು ಪರಿಶೀಲನೆ ನಡೆಸಿದ ಮುಖ್ಯಮಂತ್ರಿ, ಆನಂತರ ಗದಗ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಇನ್ಪುಟ್ ಸಬ್ಸಿಡಿ ವಿತರಣೆಗಾಗಿ 2015-16ನೆ ಸಾಲಿನಲ್ಲಿ ಬಿಡುಗಡೆಯಾಗಿದ್ದ 67.81 ಕೋಟಿ ರೂ.ಗಳನ್ನು 1.53 ಲಕ್ಷ ರೈತರಿಗೆ ವಿತರಿಸಲಾಗಿದೆ. ಕೋಲಾರ ಮತ್ತು ವಿಜಯಪುರ ಜಿಲ್ಲೆಗಳಿಂದ 12.87 ಕೋಟಿ ರೂ.ಬಿಡುಗಡೆ ಮಾಡಿದ್ದು, ಕೂಡಲೇ ರೈತರಿಗೆ ಪರಿಹಾರ ವಿತರಿಸಿ ಬಳಕೆ ಪ್ರಮಾಣ ಪತ್ರವನ್ನು ಸರಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.
ತುರ್ತು ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲೆಗೆ 11.40 ಕೋಟಿ ರೂ.ಬಿಡುಗಡೆ ಮಾಡಿದ್ದು, 2.97 ಕೋಟಿ ರೂ.ವೆಚ್ಚ ಮಾಡಲಾಗಿದೆ. ಎ.1ರ ನಂತರ 5 ಕೋಟಿ ರೂ.ಗಳನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ತುರ್ತಾಗಿ ಕುಡಿಯುವ ನೀರು, ಮೇವು, ಗೋಶಾಲೆ ಸ್ಥಾಪನೆ ಉದ್ದೇಶಕ್ಕಾಗಿ ಬಳಕೆ ಮಾಡಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ಮುಖ್ಯಮಂತ್ರಿ ಜಿಲ್ಲಾಡಳಿತಕ್ಕೆ ಆದೇಶಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 2016-17ನೆ ಸಾಲಿನಲ್ಲಿ 64.46 ಕೋಟಿ ರೂ.ಮೊತ್ತದ 16.29ಲಕ್ಷ ಮಾನವ ದಿನಗಳ ಸೃಜನೆ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಅವಲಂಬಿತವಾಗಿರುವ 51 ಕೆರೆಗಳ ಹೂಳೆತ್ತಿ, ಮುಂದಿನ ದಿನಗಳಲ್ಲಿ ನೀರು ತುಂಬಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಮುಖ್ಯಮಂತ್ರಿ ಕಟ್ಟಪ್ಪಣೆ ಮಾಡಿದರು.
ಮೇವು ಸಂಗ್ರಹಣೆಗೆ ಹೆಚ್ಚು ಒತ್ತು ನೀಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಆವಶ್ಯಕತೆಗೆ ಅನುಗುಣವಾಗಿ ಮೇವು ಬ್ಯಾಂಕುಗಳ ಸಂಖ್ಯೆ ಹೆಚ್ಚಿಸಲು ಮತ್ತು ಗೋಶಾಲೆಗಳನ್ನು, ನೀರು, ನೆರಳು, ಔಷಧಿ ಮತ್ತು ಮೇವಿನೊಂದಿಗೆ ಸ್ಥಾಪಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ಜಿಲ್ಲೆಯ ಮಹತ್ವದ ಕೆರೆಗಳ ಹೂಳೆತ್ತಲೂ ಕ್ರಮವಹಿಸುವಂತೆ ಹಾಗೂ ಬತ್ತಿ ಹೋಗಿರುವ ಕೊಳವೆ ಬಾವಿಗಳ ಪುನಶ್ಚೇತನಕ್ಕಾಗಿ ಅಗತ್ಯವಿರುವ ಮಾರ್ಗೋಪಾಯ ಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಶಾಶ್ವತ ಪರ್ಯಾಯ ನೀರಿನ ಮೂಲಗಳನ್ನು ರೂಪಿಸಿಕೊಳ್ಳುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಚಾಲ್ತಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣ ಗೊಳಿಸಬೇಕು. ಬರ ಪರಿಸ್ಥಿತಿ ನಿರ್ವಹಣೆಗಾಗಿ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರನ್ನು ಬೆಳಗ್ಗೆಯಿಂದ ಸಂಜೆವರೆಗೆ ಹಳ್ಳಿಗಳಲ್ಲೆ ಇದ್ದು, ಸಮಸ್ಯೆಗಳಿಗೆ ಕೂಡಲೆ ಸ್ಪಂದಿಸುವಂತೆ ಸುತ್ತೋಲೆ ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ಖಾಸಗಿ ಕೊಳವೆ ಬಾವಿಗಳು ವಶಕ್ಕೆ: ಅವಶ್ಯವಿದ್ದಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆದು ಮಾಲಕರಿಗೆ ಸೂಕ್ತ ಪರಹಾರ ನೀಡಿ ನೀರು ಪೂರೈಸಲು ಕ್ರಮವಹಿಸುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಶಾಸಕರ ಉಪಸ್ಥಿತಿಯಲ್ಲಿ ಎಲ್ಲ ಪಿಡಿಒಗಳೊಂದಿಗೆ ವಾರಕ್ಕೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುವಂತೆ ಹಾಗೂ ಪಿಡಿಒಗಳಿಗೆ ಹಳ್ಳಿಯಲ್ಲಿ ಸಂಜೆವರೆಗೆ ಇದ್ದು, ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಕ್ರಮವಹಿಸಲು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
‘ಬರ’ ಖುದ್ದು ಪರಿಶೀಲಿಸದ ಅಧಿಕಾರಿಗಳ ಅಮಾನತು
ಕೊಪ್ಪಳ, ಎ. 27: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಳೆಹಾನಿ ಪ್ರದೇಶಗಳಿಗೆ ತೆರಳಿ ಖುದ್ದ ಸಮೀಕ್ಷೆ ನಡೆಸದೆ, ಮಾಹಿತಿ ಸಂಗ್ರಹಿಸುವ ಮೂಲಕ ಕರ್ತವ್ಯ ಲೋಪವೆಸಗಿದ್ದ ಇಬ್ಬರು ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.
ಬುಧವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಯಲಬುರ್ಗಾ ತಹಶೀಲ್ದಾರ್ ಶಿವಲಿಂಗಪ್ಪ ಪಟ್ಟದಕಲ್ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಕಾಂತ್ ಕೋಟಿಮನಿ ಬೆಳಹಾನಿ ಬಗ್ಗೆ ಖುದ್ದು ಪರಿಶೀಲಿಸಿ ವರದಿ ನೀಡದ ಹಿನ್ನೆಲೆಯಲ್ಲಿ ಅಮಾನತುಗೊಳಿಸುವಂತೆ ಆದೇಶ ನೀಡಿದರು.