×
Ad

ಶೋಚನೀಯ ಸ್ಥಿತಿಯಲ್ಲಿ ವಲಸಿಗರು

Update: 2016-04-27 23:23 IST

- ಮಂಜುನಾಥ, ದಾಸನಪುರ
ಬೆಂಗಳೂರು, ಎ.27: ನಗರದಕ್ಕೆ ಉದ್ಯೋಗವನ್ನರಸಿ ಬರುವ ಉತ್ತರ ಕರ್ನಾಟಕದ ವಲಸಿಗರ ಪರಿಸ್ಥಿತಿ ತೀರ ಶೋಚನೀಯವಾಗಿದ್ದು, ಹೊಟ್ಟೆತುಂಬ ಕುಡಿಯಲು ನೀರು ಸಹ ಸಿಗದಂತಹ ದಿಕ್ಕೆಟ್ಟ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಪ್ರತಿದಿನ ಉತ್ತರ ಕರ್ನಾಟಕದಿಂದ ಸಾವಿರಾರು ಮಂದಿ ವಲಸಿಗರು ನಗರಕ್ಕೆ ಬರುವುದು ಹೊಸದೇನಲ್ಲ. ತಮ್ಮ ಊರು, ಬಂಧುಗಳನ್ನು ಬಿಟ್ಟು, ಕೇವಲ ದುಡಿಮೆಗಾಗಿ ನಗರಕ್ಕೆ ಬರುತ್ತಾರೆ. ಆದರೆ, ಇವರು ಉಳಿದುಕೊಳ್ಳಲು ಸೂಕ್ತವಾದ ಸ್ಥಳವಿಲ್ಲದೆ, ರಸ್ತೆ ಬದಿಯಲ್ಲಿ, ಸರಕಾರದ ಖಾಲಿ ಜಾಗದಲ್ಲಿ, ಬಸ್ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳ ಆಶ್ರಯದಲ್ಲಿ ಬದುಕುತ್ತಿದ್ದಾರೆ.
ಹಳ್ಳಿಯಲ್ಲಿ ರೈತ, ಇಲ್ಲಿ ಕೂಲಿಯಾಳು: ನನ್ನ ಹೆಸರು ಭೀಮಪ್ಪ, ಬಿಜಾಪುರ ಜಿಲ್ಲೆಯವನು. ನಾನೇನು ಭಿಕಾರಿಯಲ್ಲ. ನಂಗೆ 5 ಎಕರೆ ಜಮೀನಿದೆ. ಹಿಂದಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಇದರಿಂದ ಬೆಳೆ ಬೆಳೆದು, ಕುಟುಂಬವನ್ನು ನಿರ್ವಹಿಸುತ್ತಿದ್ದೆ. ಈಗ ಮಳೆಯೂ ಇಲ್ಲ, ಬೆಳೆಯೂ ಇಲ್ಲ. ಇದರಿಂದ ಹೊಟ್ಟೆಪಾಡಿಗಾಗಿ ಇಲ್ಲಿಗೆ ಬರಬೇಕಾಯಿತು ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಬೆಂಗಳೂರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಏನಾದರು ಕೆಲಸ ಮಾಡಬಹುದು. ಆದರೆ, ವಾಸಿಸಲು ಮನೆಯಿಲ್ಲ. ಜೋಪಡಿಯಲ್ಲಿದ್ದೇವೆ. ಹೆಂಡತಿ ಮೂರು ಮಕ್ಕಳ ಜೊತೆ ವಾಸ ಮಾಡಲು ತೀರ ಕಷ್ಟವಾಗುತ್ತಿದೆ. ಹಲವು ಬಾರಿ ಜೀವನ ಸಾಕಪ್ಪಾ ಅನಿಸಿದರು, ಮಕ್ಕಳಿಗಾಗಿ ಜೀವನ ದೂಡುತ್ತಿದ್ದೇವೆ ಎಂದು ಬದುಕಿನ ಕಷ್ಟವನ್ನು ತೋಡಿಕೊಂಡರು.
ನೀರಿಗಾರಿ ಪರದಾಟವಾಗಿದೆ: ಕೆಲಸ ಮಾಡಿ, ಹೊಟ್ಟೆ ಹೊರೆಯುವುದಕ್ಕಾಗಿ ಬೆಂಗಳೂರಿಗೆ ಬಂದಾಗಿದೆ. ಇಲ್ಲಿ ದಿನಕ್ಕೊಂದು ಕೆಲಸ ಮಾಡಿ, ದಿನಕ್ಕೆ ನೂರು ಇಲ್ಲವೆ ಇನ್ನೂರು ಸಂಪಾದನೆ ಮಾಡ್ತೀವಿ, ಆದರೆ, ಕುಡಿಯಲು ನೀರೇ ಇಲ್ಲವಾಗಿದೆ. ನಾವು ಇರುವುದು ಇಲ್ಲಿನ ದೀಪಾಂಜಲಿ ನಗರದಲ್ಲಿ. ಎರಡು-ಮೂರು ದಿನಕ್ಕೆ ಒಮ್ಮೆ ನೀರು ಬಿಡಲಾಗುತ್ತದೆ. ಅದು ಕೇವಲ ನಾಲ್ಕು ಕೊಡ ಮಾತ್ರ. ಇಷ್ಟು ನೀರಲ್ಲಿ ಅಡುಗೆ ಮಾಡಲು, ಕುಡಿಯಲು ಸಾಧ್ಯವಿಲ್ಲ. ಸ್ನಾನವಂತೂ ದೂರದ ಮಾತಾಗಿದೆ ಎಂದು ಬಿಜಾಪುರ ಜಿಲ್ಲೆಯ ಲಕ್ಷ್ಮಮ್ಮ ತಿಳಿಸಿದರು.
ಬೆಳಗ್ಗೆಯಿಂದ ರಾತ್ರಿಯವರೆಗೂ ಬೆವರು ಸುರಿಸಿ ದುಡಿಯುವ ನಾವು ಹೊಟ್ಟೆ ತುಂಬ ಊಟ ಮಾಡಲು, ನೀರು ಕುಡಿಯಲು ಭಯವಾಗುತ್ತದೆ. ನಮಗೆ ಶೌಚಾಲಯ ವ್ಯವಸ್ಥೆಯಿಲ್ಲ. ಮೂತ್ರಕ್ಕೆ ಅವಸರವಾದರೆ ನಾವು ಪಡುವ ಕಷ್ಟ ಹೇಳತೀರದಾಗಿದೆ. ಆ ಸಂದರ್ಭಗಳಲ್ಲಿ ಬದುಕೇ ಸಾಕು ಎನಿಸುತ್ತದೆ ಎಂದು ತಮ್ಮ ನೋವುಗಳನ್ನು ಹಂಚಿಕೊಂಡರು.

ಬೇಸಿಗೆ ಸಂದರ್ಭದಲ್ಲಿ ವಲಸೆ ಬರುವುದು ಸಹಜವಾದ ಪ್ರಕ್ರಿಯೆ. ವಲಸೆಗಾರರಿಗೆ ಸೂಕ್ತವಾದ ಸೌಲಭ್ಯ ಕಲ್ಪಿಸುವುದು ಸರಕಾರದ ಜವಾಬ್ದಾರಿ. ಪ್ರಾಥಮಿಕವಾಗಿ ಶೆಲ್ಟರ್‌ಗಳನ್ನು ನಿರ್ಮಿಸುವುದರ ಮೂಲಕ ತಾತ್ಕಾಲಿಕ ವಸತಿಯನ್ನು ಕಲ್ಪಿಸಬೇಕು. ಶುದ್ದ ನೀರು ಒದಗಿಸಬೇಕು ಹಾಗೂ ಸರಕಾರವೆ ಅಗತ್ಯವಿರುವ ತಾತ್ಕಾಲಿಕ ಉದ್ಯೋಗವನ್ನು ಕಲ್ಪಿಸಬೇಕು.
-ಬಿ.ಟಿ.ವೆಂಕಟೇಶ್, ಹಿರಿಯ ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News