ಕೊನೆಗೂ ಬಹಿರಂಗ: ಮಾಜಿ ಪ್ರಧಾನಿ ದೇವೇಗೌಡರು ಸದಾ ತೂಕಡಿಸುತ್ತಿದ್ದುದರ ಹಿಂದಿನ ರಹಸ್ಯ!
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಸದಾ ತೂಕಡಿಸುತ್ತಿದ್ದುದರ ಹಿಂದಿನ ರಹಸ್ಯ ಕೊನೆಗೂ ಬಯಲಾಗಿದೆ. ವಿಶಿಷ್ಟವಾದ ಗೌಡರ ಅಡುಗೆಯನ್ನು ಪುಷ್ಕಳವಾಗಿ ಮೆಲ್ಲುತ್ತಿದ್ದರೆ ಖಂಡಿತವಾಗಿಯೂ ನೀವು ಕೂಡಾ ತೂಕಡಿಸುತ್ತೀರಿ. ಗೌಡರ ಶೈಲಿಯ ವೈವಿಧ್ಯಮಯ ಊಟ ಸವಿಯುವ ಅವಕಾಶವನ್ನು ಬೆಂಗಳೂರು ಊಟ ಕಂಪನಿ (ಬಿಓಸಿ) ಕಲ್ಪಿಸಿಕೊಟ್ಟಿದೆ. ಮಂಗಳೂರು ಶೈಲಿ ಹಾಗೂ ಗೌಡ ಸಂಪ್ರದಾಯದ ಪಾಕ ವೈವಿಧ್ಯವನ್ನು ಬಾಯಿ ಚಪ್ಪರಿಸುತ್ತಾ ಸವಿಯಬೇಕಾದರೆ ಬಿಓಸಿಗೊಮ್ಮೆ ಭೇಟಿ ಕೊಡಿ,
ಊಟದ ಕೊನೆಗೆ ಅಜ್ಜಿ ಜಾಮೂನು. ಅಮ್ಮಾನಿ ಜಾಮೂನು ಹೆಸರಿನ ಈ ವಿಶಿಷ್ಟ ಖಾದ್ಯದ ಕೈರುಚಿ ಗೌಡರ ಮನೆಯ ಹೆಣ್ಣುಮಕ್ಕಳಿಗಷ್ಟೇ ಸೀಮಿತ. ಇಂಥ ಜಾಮೂನು ಮತ್ತೆಲ್ಲೂ ಸಿಗದು. ಸಿಕ್ಕಿದರೂ ಅದರ ಮಿಶ್ರಣ ಈ ಹದದಲ್ಲಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಬಿಓಸಿ ಮಾಲಕಿ ದಿವ್ಯಾ ಪ್ರಭಾಕರ್.
ಕೇವಲ ಎರಡು ತಿಂಗಳ ಹಿಂದೆ ಮಂಗಳೂರು ಮೂಲದ ವಿಶಾಲ್ ಶೆಟ್ಟಿ ಜತೆ ಸೇರಿಕೊಂಡು ಆರಂಭಿಸಿದ ಈ ವಿಶಿಷ್ಟ ಪಾಕಶಾಲೆ ಇದೀಗ ಬೆಂಗಳೂರಲ್ಲಿ ಜನಜನಿತ. ಮಂಗಳೂರು ಶೈಲಿ ಜತೆಗೆ ಗೌಡ ಶೈಲಿಯ ಊಟ ಸಿಗುವ ಬೆಂಗಳೂರಿನ ಬೆರಳೆಣಿಕೆ ತಾಣಗಳಲ್ಲಿ ಇದೂ ಒಂದು. ಆತಿಥ್ಯ ಉದ್ಯಮದಲ್ಲಿ ಸಾಕಷ್ಟು ಅನುಭವ ಇರುವ ಇಬ್ಬರೂ, ಪ್ರಾದೇಶಿಕ ಸೊಗಡಿನ ಖಾದ್ಯ ಉಣಬಡಿಸುವ ಉದ್ದೇಶದಿಂದ ಆರಂಭಿಸಿದ ಈ ಆಹಾರೋದ್ಯಮ ಅಲ್ಪ ಅವಧಿಯಲ್ಲೇ ಜನಪ್ರಿಯವಾಗಿದೆ.
ಮೂಲಭೂತವಾಗಿ ಬಿಓಸಿ ಆರಂಭವಾದದ್ದು ಕೇಟರಿಂಗ್ ಸೇವೆಗಾಗಿ. ಕ್ಯಾಂಬ್ರಿಡ್ಜ್ ಲೇಔಟ್‌ನಲ್ಲಿ ಅಗತ್ಯಕ್ಕಿಂತ ದೊಡ್ಡ ಜಾಗ ಸಿಕ್ಕಿದ್ದರಿಂದ ಎರಡು ಹಾಲ್‌ನ ಈ ಭೋಜನಶಾಲೆ ಆರಂಭಿಸುವ ಯೋಚನೆ ಬಂತು ಎಂದು ಶೆಟ್ಟಿ ವಿವರಿಸುತ್ತಾರೆ. ಗೌಡರ ಸಂಪ್ರದಾಯದಂತೆ ತಾವು ಬೆಳೆದದ್ದನ್ನೆಲ್ಲ ತಿನ್ನುವ ಜಾಯಮಾನ ಅವರದ್ದು. ಅದು ಕಾಳು, ತರಕಾರಿ, ಸಾಕು ಪ್ರಾಣಿ ಯಾವುದೂ ಇರಬಹುದು. ಇದನ್ನು ರುಚಿಕರವಾಗಿ ಮಾಡಲು ಈರುಳ್ಳಿ,ಬೆಳ್ಳುಳ್ಳಿ, ಶುಂಠಿ ಹಾಗೂ ದನಿಯಾ ಅಧಿಕವಾಗಿ ಬಳಸುತ್ತೇವೆ ಎಂದು ಪ್ರಭಾಕರ್ ಪಾಕವೈಶಿಷ್ಟ್ಯ ವಿವರಿಸುತ್ತಾರೆ.
ಗೌಡರ ಅಡುಗೆ ಅಂದ ಮೇಲೆ ರಾಗಿ ಮುದ್ದೆ, ಮಟನ್/ ಚಿಕನ್/ ಬಸ್ಸಾರು, ಮಸ್ಸೊಪ್ಪು, ಪಲ್ಯ, ಅನ್ನ, ರಸಂ, ಮೊಸರು, ಬೆಲ್ಲದಿಂದ ತಯಾರಿಸಿದ ಒಂದು ಸಿಹಿ ಖಾದ್ಯ ಕಡ್ಡಾಯ. ಇನ್ನು ಔತಣಕೂಟದ ವಿಶೇಷ ಅಡುಗೆಯ ಮೆನು ಇನ್ನೂ ಬೆಳೆಯುತ್ತದೆ. ಮಸಾಲೆ ಮಜ್ಜಿಗೆ, ಕೋಸಂಬರಿಯೊಂದಿಗೆ ಆರಂಭವಾಗುವ ಖಾದ್ಯವೈವಿಧ್ಯದಲ್ಲಿ ಗೋಳಿಬಜೆ, ಕಾಯಿ ಚಟ್ನಿ, ಮಟನ್ ಕಟ್ಲೇಟ್‌ಯಂಥ ಸ್ಟಾರ್ಟರ್‌ಗಳು, ನೀರ್‌ದೋಸೆ ಅಥವಾ ರೊಟ್ಟಿ ಜತೆಗೆ ಕೋರಿ ಗಸಿ, ಪೋರ್ಕ್ ಬಪತ್, ಸೀರ್ ಫಿಶ್ ಫ್ರೈ, ಮಟನ್ ಸುಕ್ಕಾ, ಮನೋಲಿ, ಬನ್ನೂರು ಮಾಂಸ ಪಲಾವ್, ಪಚಡಿ, ಪುದಿನ ಚಟ್ನಿ, ಬೇಯಿಸಿದ ಮೊಟ್ಟೆ, ಅನ್ನಕ್ಕೆ ಮಂಗಳೂರು ವೈಶಿಷ್ಟ್ಯವಾದ ಮೆಣಸಿನಕಾಯಿ, ಕೊನೆಗೆ ಮೊಸರನ್ನ ಸೇರಿರುತ್ತದೆ.
ಇಷ್ಟನ್ನು ಸವಿದರೆ ದೇವೇಗೌಡರೇನು, ಯಾರಿಗೂ ನಿದ್ರೆ ಬರಲೇಬೇಕು!
ಕೃಪೆ: indianexpress.com