×
Ad

ಏರುತ್ತಿರುವ ತಾಪಮಾನ: ಕುಸಿಯುತ್ತಿರುವ ಅಂತರ್ಜಲ

Update: 2016-04-28 21:49 IST

ಬಿ. ರೇಣುಕೇಶ್

ಶಿವಮೊಗ್ಗ, ಎ. 28: ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನದ ಪ್ರಮಾಣ ಏರಿಕೆಯಾಗುತ್ತಿದೆ. ಹಲವೆಡೆ ದಾಖಲೆಯ ಪ್ರಮಾಣದಲ್ಲಿ ಬಿಸಿಲು ಬೀಳುತ್ತಿದ್ದು, ಬಿರು ಬಿಸಿಲಿಗೆ ನಾಗರಿಕರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ ಏರುತ್ತಿರುವ ತಾಪಮಾನದಿಂದ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಪೂರೈಕೆಯ ಜಲಮೂಲಗಳ ಅಂತರ್ಜಲದ ಮಟ್ಟ ದಿಢೀರ್ ಆಗಿ ಕುಸಿಯುತ್ತಿದೆ. ಇದರಿಂದ ಈಗಾಗಲೇ ಹಲವು ಗ್ರಾಮಗಳಲ್ಲಿ ಜೀವಜಲಕ್ಕೆ ತೀವ್ರ ಹಾಹಾಕಾರ ಎದುರಾಗಿದೆ. ಜಿಲ್ಲೆಯಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸ್ವರೂಪದ ಹಾಹಾಕಾರ ತಲೆದೋರುವುದು ನಿಶ್ಚಿತವಾಗಿದೆ. ಇದು ಸ್ಥಳೀಯಾಡಳಿತಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವುದು ಖಚಿತವಾಗಿದೆ. ಮಳೆ ಬಂದರೆ ಈಗಿನ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆಯಾಗಲಿದೆ ಎಂದು ಜಿಪಂ ಹಿರಿಯ ಅಧಿಕಾರಿಯೋರ್ವರು ಅಭಿಪ್ರಾಯಪಡುತ್ತಾರೆ. ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿತದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಗ್ರಾಮಗಳಿಗೆ, ಖಾಸಗಿ ವ್ಯಕ್ತಿಗಳ ಒಡೆತನ

ದಲ್ಲಿರುವ ಬೋರ್‌ವೆಲ್-ಬಾವಿಗಳಿಂದ ನೀರು ಪೂರೈಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಶಿವಮೊಗ್ಗ ತಾಲೂಕಿನ ಕುಂಸಿ ಮೊದಲಾದೆಡೆ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಕೆಯ ವ್ಯವಸ್ಥೆ ಮಾಡಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ತಳಮಟ್ಟಕ್ಕೆ: ಜಿಲ್ಲೆಯ ಹಲವು ಗ್ರಾಮೀಣ ಭಾಗಗಳಲ್ಲಿ ತಾಪ ಮಾನದ ಕಾರಣದಿಂದ ಕುಡಿಯುವ ನೀರು ಪೂರೈಕೆ ಮಾಡುವ ಬೋರ್‌ವೆಲ್, ಬಾವಿ, ಕೆರೆಗಳಲ್ಲಿ ನೀರಿನ ಪ್ರಮಾಣ ಸಂಪೂರ್ಣವಾಗಿ ಕುಸಿದಿದೆ. ಕೆಲವೆಡೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿಲ್ಲ. ಮತ್ತೆ ಕೆಲವೆಡೆ ಸಂಪೂರ್ಣವಾಗಿ ಬೋರ್‌ವೆಲ್-ಬಾವಿ

 ಗಳು ನೀರಿಲ್ಲದೆ ಬರಿ ದಾಗಿ ಹೋಗಿವೆ. ಇಂತಹ ಗ್ರಾಮಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯುವ ಹಾಗೂ ಬದಲಿ ವ್ಯವಸ್ಥೆಯ ಮೂಲಕ ನೀರು ಪೂರೈಸುವ ಕೆಲಸವನ್ನು ಸ್ಥಳೀಯಾಡಳಿತಗಳು ಮಾಡುತ್ತಿವೆ. ಜಿಪಂ ಮೂಲಗಳು ಹೇಳುವ ಪ್ರಕಾರ, ಜಿಲ್ಲೆ ಸರಿಸುಮಾರು 50ಕ್ಕೂ ಅಧಿಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಆ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬದಲಿ ವ್ಯವಸ್ಥೆ ಮಾಡುವ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಸಮಸ್ಯೆ ಗಂಭೀರ ಸ್ವರೂಪ ತಾಳದಂತೆ ಎಚ್ಚರವಹಿಸಲಾಗಿದೆ ಎಂದು ಹೇಳುತ್ತವೆ. ಖಾಸಗಿ ಮೊರೆ:   ್ರಾಮೀಣ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್ ಸುದ್ದಿಗಾರ ರೊಂದಿಗೆ ಮಾತನಾಡಿ, ಶಿವ ಮೊಗ್ಗ ತಾಲೂಕಿನ ಹಸೂಡಿ, ಮಡೇನೂರು ಕ್ಯಾಂಪ್, ಆಲ್ದಳ್ಳಿ, ಹುಲ್ಲನಹಳ್ಳಿ, ರೆಡ್ಡಿಕ್ಯಾಂಪ್, ಮಂಜರಿಕೊಪ್ಪ, ಬಿಲ್ಗುಣಿ ಮೊದಲಾದ ಗ್ರಾಮ ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿ ರುವ ಮಾಹಿತಿಗಳು ಬಂದಿವೆ. ಇಂತಹ ಗ್ರಾಮಗಳಲ್ಲಿ ಬದಲಿ ವ್ಯವಸ್ಥೆ

ಗೆ ಕ್ರಮಕೈಗೊಳ್ಳಲಾಗಿದೆ. ಕುಂಸಿಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಬೋರ್‌ವೆಲ್ ಮೂಲಕ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ಅಗತ್ಯ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಅನಿವಾರ್ಯವಾದಲ್ಲಿ ಇತರೆ ತಾಲೂಕುಗಳಲ್ಲಿಯೂ ಖಾಸಗಿ ಜಲಮೂಲಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತದ ಮಾಹಿತಿಗಳು ಬರುತ್ತಿವೆ. ಇಂತಹ ಪ್ರದೇಶಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯಿಸುವುದರ ಜೊತೆಗೆ, ಖಾಸಗಿ ಬೋರ್‌ವೆಲ್‌ಗಳ ಮೂಲಕವು ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಉಳಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿಯೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತಹ ಪರಿಸ್ಥಿತಿ ಉದ್ಭವವಾಗಿಲ್ಲ

<ಎಸ್.ಎಂ.ಹರೀಶ್, ಅಧಿಕಾರಿ

ತತ್ತರ: ಇ

ತ್ತೀಚಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಮಾಣದ ತಾಪಮಾನ ದಾಖಲಾಗುತ್ತಿದೆ. ಬಯಲುನಾಡುಗಳನ್ನು ಮೀರಿಸುವ ರೀತಿಯಲ್ಲಿ ಬಿಸಿಲು ಬೀಳುತ್ತಿದೆ. ಇದರಿಂದ ಮಲೆನಾಡು ಭಾಗವಾದ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕುಗಳಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವಂತಾಗಿದೆ. ಜಲಮೂಲಗಳು ಬರಿದಾಗುವ ಹಂತಕ್ಕೆ ಬರುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮಲೆನಾಡಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಒಟ್ಟಾರೆ ಪ್ರಸ್ತುತ ಬೇಸಿಗೆ ಮಲೆನಾಡಿಗರ ಪಾಲಿಗೆ ಕರಾಳವಾಗಿ ಪರಿಣಮಿಸಿದೆ. ಬಿಸಿಲ ಬೇಗೆಗೆ ಜನ-ಜಾನುವಾರುಗಳು ತತ್ತರಿಸುವಂತಾಗಿದೆ. ಹಲವೆಡೆ ಕುಡಿಯುವ ನೀರಿಗೂ ಪರಿತಪಿಸುವಂತಹ ಸ್ಥಿತಿ ಸೃಷ್ಟಿಯಾಗಿರುವುದಂತೂ ಸತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News