ಕಠಿಣ ಪರಿಶ್ರಮ, ಆತ್ಮವಿಶ್ವಾಸದಿಂದ ಗುರಿ ತಲುಪಲು ಸಾಧ್ಯ: ಶಾಸಕ ಬಿ.ವೈ ರಾಘವೇಂದ್ರ
ಶಿಕಾರಿಪುರ, ಎ.28: ಸಾಧನೆಗೆ ಸುಲಭದ ದಾರಿ ಇಲ್ಲ. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಮಾತ್ರ ವಿದ್ಯಾರ್ಥಿಗಳು ಸಾಧನೆಯ ಗುರಿಯನ್ನು ತಲುಪಬಹುದಾಗಿದೆ ಎಂದು ಶಾಸಕ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2015-16ನೆ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಎನ್.ಸಿ.ಸಿ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೋರ್ವ ವ್ಯಕ್ತಿಯ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು, ಹದಿಹರೆಯದ ವಯಸ್ಸಿನಲ್ಲಿ ನಡವಳಿಕೆ ತಪ್ಪು ಆಗದ ರೀತಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಲ್ಲಿ ಸುಂದರ ಹೂ ತೋಟದಲ್ಲಿನ ಹೂವಿನ ರೀತಿಯಾಗಲು ಸಾಧ್ಯ ಎಂದ ಅವರು, ಸಾಧನೆ, ಯಶಸ್ಸಿಗೆ ಆತ್ಮವಿಶ್ವಾಸ, ಪರಿಶ್ರಮ ಮುಖ್ಯವಾಗಿದ್ದು, ಪ್ರತಿಯೋರ್ವ ವಿದ್ಯಾರ್ಥಿ ನಿರ್ದಿಷ್ಟ ಗುರಿ ಸಾಧನೆಗೆ ಕಠಿಣ ಶ್ರಮದಿಂದ ಪ್ರಯತ್ನಿಸ ಬೇಕಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಕಾಲೇಜಿಗೆ ಸುಸಜ್ಜಿತ ಆಡಿಟೋರಿಯಂ, ಕೊಠಡಿ, ಕ್ರೀಡಾಂಗಣ, ಉಪನ್ಯಾಸಕರು ಮತ್ತಿತರ ಸರ್ವ ಸೌಲಭ್ಯವನ್ನು ಕಲ್ಪಿಸಿದ ಮಾಜಿ ಮುಖ್ಯಮಂತ್ರಿ, ಸಂಸದ ಯಡಿಯೂರಪ್ಪನವರನ್ನು ಸ್ಮರಿಸಬೇಕಾಗಿದೆ ಎಂದ ಅವರು, ಉಪಕುಲಪತಿಗಳು 400 ಮೀ. ಓಟದ ಟ್ರಾಕ್ ವೀಕ್ಷಿಸಿ ಸಂತಸಪಟ್ಟಿದ್ದು, ಇದೀಗ ತಲಾ 1.5 ಕೋಟಿ ರೂ. ವೆಚ್ಚದ ವಿದ್ಯಾರ್ಥಿನಿ ಹಾಸ್ಟೆಲ್ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಚನ್ನಕೇಶವ ನಗರದಲ್ಲಿ ಆರಂಭವಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ಉಪನ್ಯಾಸಕ, ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ರಾಜಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ರ್ಯಾಂಕ್ ಗಳಿಸಿದ ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಸಕರು ವೈಯಕ್ತಿಕವಾಗಿ ನಗದು ಬಹುಮಾನ ವಿತರಿಸಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಜಿ.ಆರ್.ಹೆಗಡೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ, ಪುರಸಭಾ ಉಪಾಧ್ಯಕ್ಷ ಅಂಗಡಿ ಜಗದೀಶ, ತಹಶೀಲ್ದಾರ್ ಶಿವಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿಯ ರತ್ನಾ ಜಯಣ್ಣ, ಎಸ್.ಎನ್.ಮಂಜುನಾಥ, ಉಪನ್ಯಾಸಕರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಅರ್ಚನಾ ಸಂಗಡಿಗರು ಪ್ರಾರ್ಥಿಸಿದರು. ಮಂಜುನಾಥ ರೆಡ್ಡಿ ಸ್ವಾಗತಿಸಿ, ಸುನೀಲ್‌ಕುಮಾರ್ ನಿರೂಪಿಸಿ ವಂದಿಸಿದರು.