×
Ad

ನೀರಿನ ಕರ ವಸೂಲಿಯಲ್ಲಿ ಹಿನ್ನಡೆ: ಸಚಿವ ಸೊರಕೆ ಗರಂ

Update: 2016-04-28 22:00 IST

 ಮಡಿಕೇರಿ, ಎ.28: ಕೊಡಗು ಜಿಲ್ಲೆಯ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕರ ವಸೂಲಾತಿ ಅತ್ಯಂತ ಕನಿಷ್ಠ ಪ್ರಮಾಣದಲ್ಲಿರುವ ಬಗ್ಗೆ ಅಧಿಕಾರಿಗಳನ್ನು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಗರಾಭಿವೃದ್ಧಿಗೆ ತೆರಿಗೆ ಅತ್ಯಂತ ಪ್ರಮುಖವಾಗಿದ್ದು, ಇದನ್ನೆ ಸಮರ್ಪಕವಾಗಿ ಮಾಡುತ್ತಿಲ್ಲವೆಂದಾದರೆ ನಗರಸಭೆೆ, ಪಟ್ಟಣ ಪಂಚಾಯತ್‌ಗಳನ್ನು ನಡೆಸುವುದಾದರು ಹೇಗೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಡೆದ ಸಭೆೆಯಲ್ಲಿ ಸಚಿವರು ಮಡಿಕೇರಿ ನಗರಸಭೆಯ ನೀರಿನ ಕರ ವಸೂಲಾತಿಯ ಮಾಹಿತಿಯನ್ನು ಬಯಸಿದರು. ಸಂಬಂಧಪಟ್ಟ ಅಧಿಕಾರಿಗಳು ಮಡಿಕೆೇರಿ ನಗರಸಭೆಯಲ್ಲಿ ಶೇ.31ರಷ್ಟು, ಕುಶಾಲನಗರದಲ್ಲಿ ಶೇ.27, ವೀರಾಜಪೇಟೆ ಪಟ್ಟಣ ಪಂಚಾಯತ್‌ನಲ್ಲಿ ಶೇ.34 ರಷ್ಟು ಕರವಸೂಲಾತಿಯಾಗಿರುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ನಗರಸಭೆ ಆಯುಕ್ತೆ ಪುಷ್ಪಾವತಿ, ಬಿಲ್ ಕಲೆಕ್ಟರ್‌ಗಳ ಸಮಸ್ಯೆ ಇರುವ ಬಗ್ಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಅವಕಾಶವಿರುವುದಾಗಿ ತಿಳಿಸಿ, ನೀರಿನ ಕರದೊಂದಿಗೆ ಆಸ್ತಿ ತೆರಿಗೆ ವಸೂಲಾತಿಯ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ಅನಧಿಕೃತ ಕಟ್ಟಡ ಆಸ್ತಿಗಳನ್ನು ಗುರುತಿಸಿ ತೆರಿಗೆ ವಸೂಲಾತಿ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಸ್ಪಷ್ಟ ಪಡಿಸಿದರು.

ಬಿಡುಗಡೆಯಾದ ಅನುದಾನ ಖರ್ಚು ಮಾಡದ ನಗರಸಭೆ: ಮಡಿಕೆೇರಿ ನಗರಸಭೆೆಗೆ ಎಸ್‌ಎಫ್‌ಸಿ ಯಡಿ ಬಿಡುಗಡೆಯಾದ 60 ಲಕ್ಷ ರೂ. ಅನುದಾನದಲ್ಲಿ ಕೇವಲ 11 ಲಕ್ಷ ರೂ.ಗಳಷ್ಟೆ ಬಳಕೆಯಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೊಟ್ಟಿರುವ ಅನುದಾನವನ್ನು ಬಳಕೆ ಮಾಡಲು ಏತಕ್ಕೆ ಸಾಧ್ಯವಾಗುತ್ತಿಲ್ಲ. ಯಾವ ಸಮಸ್ಯೆ ಇದೆಯೆಂದು ಪ್ರಶ್ನಿಸಿದರು.ಇದಕ್ಕೆ ಪೌರಾಯುಕ್ತೆ ಪುಷ್ಪಾವತಿ ಪ್ರತಿಕ್ರಿಯಿಸಿ, ಇನ್ನು 15 ದಿನಗಳಲ್ಲಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದಾಗ ಅಷ್ಟರೊಳಗೆ ಮಳೆಯೂ ಬಂದಿರುತ್ತದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ನಗರಾಭಿವೃದ್ಧಿ ಇಲಾಖಾ ಅಧಿಕಾರಿಗಳು, ಮಡಿಕೆೇರಿ ನಗರಸಭೆೆಗೆ 2015-16ನೆ ಸಾಲಿನಲ್ಲಿ ಒಟ್ಟು 109.19 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದ್ದು, ಕೇವಲ 35 ಲಕ್ಷ ರೂ. ವಿನಿಯೋಗವಾಗಿ, 74 ಲಕ್ಷ ರೂ. ಬಾಕಿ ಉಳಿದಿದ್ದು, ಇದೀಗ ಲಭ್ಯ 15 ಲಕ್ಷ ರೂ. ಸೇರಿದಂತೆ 89 ಲಕ್ಷ ರೂ. ಹಾಗೆಯೇ ಉಳಿದಿರುವುದಾಗಿ ಮಾಹಿತಿ ನೀಡಿದರು.

ವೀರಾಜಪೇಟೆ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲವೆಂದು ತಿಳಿಸಿದರು. ವೀರಾಜಪೇಟೆ ಪಪಂ ಅಧ್ಯಕ್ಷರು, ನೀರಿನ ಸಮಸ್ಯೆ ಇಲ್ಲದಿದ್ದರು ವಿದ್ಯುತ್ ಸಮಸ್ಯೆ ತಲೆದೋರಿರುವುದಾಗಿ ಸಚಿವರ ಗಮನ ಸೆಳೆದರು.

ಮಡಿಕೇರಿಯ ಕೂಟುಹೊಳೆ ಜಲಾಗಾರದ ಹೂಳೆತ್ತುವ 2 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಕೆಯುಡಬ್ಲುಎಸ್ ನಗರಸಭೆೆಗೆ ಹಸ್ತಾಂತರಿಸಿರುವ ಬಗ್ಗೆ ಚರ್ಚೆ ನಡೆಯಿತು. ಈ ಸಂಬಂಧ ನಗರಸಭೆಗೆ ಬಂದಿರುವ ಹಣವನ್ನು ಹಿಂದಿರುಗಿಸುವ ಮೂಲಕ ಕೆಯುಡಬ್ಲುಎಸ್‌ನಿಂದಲೆ ಹೂಳೆತ್ತುವ ಕಾಮಗಾರಿ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News