ತಲಕಾವೇರಿಯಲ್ಲಿ ನಡೆದ ಹತ್ಯೆ ಪ್ರಕರಣ ಬಯಲು ಪತಿಯನ್ನು ಕೊಲೆಗೈ ದ ಪತ್ನಿಯ ಬಂಧನ
ಮಡಿಕೇರಿ, ಎ.28: ತಲಕಾವೇರಿಯಲ್ಲಿ ನಡೆದ ಬೆಂಗಳೂರಿನ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ಹತ್ಯೆಗೀಡಾದ ವ್ಯಕ್ತಿಯ ಪತ್ನಿಯನ್ನು ಬಂಧಿಸಿದ್ದಾರೆ.
ವಿವಾಹದ ನಂತರದ ದಿನಗಳಲ್ಲಿ ಪತಿಯ ತಿರಸ್ಕಾರದ ಭಾವನೆಗೆ ಬೇಸತ್ತು ಪತಿಯನ್ನೇ ಕೊಲೆಗೈದಿರುವ ವಿಚಿತ್ರ ಘಟನೆ ಇದಾಗಿದೆ. ತಲಕಾವೇರಿ ಕ್ಷೇತ್ರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕೊಲೆಗೈಯಲ್ಪಟ್ಟ ಬೆಂಗಳೂರಿನ ವಿಜಯನಗರದ ಮಾರನಹಳ್ಳಿ ನಿವಾಸಿ ಲಿಂಗರಾಜು ಎಂಬಾತನ ಪತ್ನಿ ಆಶಾಳನ್ನು ಇದೀಗ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸುವುದರೊಂದಿಗೆ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.
ಪೊಲೀಸರು ಬಂಧಿತ ಆಶಾಳನ್ನು ವಿಚಾರಣೆಗೊಳಪಡಿಸಿದಾಗ ಹತ್ಯೆಯ ಹಿಂದಿನ ಕಾರಣ ತಿಳಿದು ಬಂದಿದ್ದು, ಐದು ತಿಂಗಳ ಹಿಂದೆ ಲಿಂಗರಾಜುವಿನ ವಿವಾಹ ಆಶಾಳೊಂದಿಗೆ ನೆರವೇರಿತ್ತು. ಆದರೆ, ವಿವಾಹದ ಬಳಿಕ ಲಿಂಗರಾಜು ತನ್ನ ಪತ್ನಿಯೊಂದಿಗೆ ಸರಿಯಾಗಿ ಬಾಳ್ವೆ ನಡೆಸದೆ, ಆಕೆಯನ್ನು ತುಚ್ಛವಾಗಿ ಕಾಣುತ್ತಿದ್ದ. ಇದರಿಂದ ಮನನೊಂದಿದ್ದ ಆಶಾ ತನ್ನ ಪತಿಯನ್ನೆ ಇಲ್ಲವಾಗಿಸುವ ದುಷ್ಕೃತ್ಯಕ್ಕೆ ಕೈಹಾಕಲು ನಿರ್ಧರಿಸಿದ್ದಳು ಎನ್ನಲಾಗಿದೆ.
ಎ.20ರಂದು ಲಿಂಗರಾಜು ಮತ್ತು ಆಶಾ ದಂಪತಿಗಳು ನಂದಿಬೆಟ್ಟಕ್ಕೆ ತೆರಳಿ, ಬಳಿಕ ಮೈಸೂರಿನಲ್ಲಿರುವ ಆಶಾಳ ಅಕ್ಕನ ಮನೆಯಲ್ಲಿ ಒಂದೆರಡು ದಿನ ತಂಗಿದ್ದ್ದು, ಎ.25 ರಂದು ಮಡಿಕೇರಿಗೆ ಆಗಮಿಸಿ ಸಂಜೆ ಭಾಗಮಂಡಲ ಕ್ಷೇತ್ರಕ್ಕೆ ತೆರಳಿ ತಂಗಿದ್ದರು. ಮರು ದಿನ ಮುಂಜಾನೆ ಇವರಿಬ್ಬರು ತಲಕಾವೇರಿ ಕ್ಷೇತ್ರಕ್ಕೆ ತೆರಳಿದ್ದರು.
ಈ ಹಂತದಲ್ಲಿ ಪತಿಯನ್ನು ಕೊಲೆಗೈಯ್ಯಲು ಸಂಚು ರೂಪಿಸಿಕೊಂಡಿದ್ದ ಆಶಾ, ಪತಿಯನ್ನು ಪುಸಲಾಯಿಸಿ ಕ್ಷೇತ್ರ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಳು. ತನ್ನ ಸರಸ ಸಲ್ಲಾಪಗಳಿಂದ ಪತಿ ಮೈಮರೆತಿರುವ ಸಂದರ್ಭದಲ್ಲಿ ಆಶಾ ತನ್ನ ಪತಿ ಲಿಂಗರಾಜುವಿನ ಕತ್ತನ್ನು ಕೊಯ್ದು ಹತ್ಯೆಗೈದಿರುವುದಾಗಿ ವಿಚಾರಣೆಯ ಸಂದರ್ಭ ತಿಳಿದು ಬಂದಿರುವುದಾಗಿ ಹೇಳಲಾಗಿದೆ. ದುಷ್ಕೃತ್ಯವೆಸಗಿದ ಬಳಿಕ ಆಶಾ ಮಡಿಕೇರಿಗೆ ತೆರಳಿ, ನಂತರ ಹಾಸನದ ಮೂಲಕ ಅರಸೀಕೆರೆಯಲ್ಲಿರುವ ತನ್ನ ಅಣ್ಣನ ಮನೆಗೆ ತೆರಳಿದ್ದಳು.
ಅದಾಗಲೆ ಪತಿ, ಪತ್ನಿಯರಿಬ್ಬರು ತಲಕಾವೇರಿಗೆ ತೆರಳಿರುವ ಬಗ್ಗೆ ಮೈಸೂರಿನಲ್ಲಿದ್ದ ಸಹೋದರಿಯಿಂದ ಮಾಹಿತಿ ಪಡೆದಿದ್ದ ಆಶಾಳ ಅಣ್ಣ, ಲಿಂಗರಾಜುವಿನ ಬಗ್ಗೆ ಪ್ರಶ್ನಿಸಿದಾಗ ಅವರು ಕೆಲಸದ ಮೇಲೆ ಹೈದರಾಬಾದ್‌ಗೆ ತೆರಳಿರುವುದಾಗಿ ತಿಳಿಸಿ, ನೈಜಾಂಶವನ್ನು ಮರೆಮಾಚಿದ್ದಳು. ಇದೇ ಸಂದರ್ಭ ಬೆಂಗಳೂರಿನಲ್ಲಿದ್ದ ಲಿಂಗರಾಜುವಿನ ಸಂಬಂಧಿ ಅಲ್ಲಿನ ಠಾಣೆೆಯಲ್ಲಿ ಲಿಂಗರಾಜು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಆದರೆ ದೂರು ದಾಖಲಾಗಿರಲಿಲ್ಲ. ಈ ಎಲ್ಲ ಘಟನೆಗಳ ನಡುವೆಯೆ ಮಡಿಕೇರಿ ಗ್ರಾಮಾಂತರ ಠಾಣಾ ಸಿಐ ಕರೀಮ್ ರಾವುತರ್, ತಲಕಾವೇರಿ ಕ್ಷೇತ್ರದಲ್ಲಿ ವ್ಯಕ್ತಿಯ ಹತ್ಯೆಯಾಗಿರುವ ಬಗ್ಗೆ ಬೆಂಗಳೂರು ಠಾಣೆಗೆ ಮಾಹಿತಿ ನೀಡಿದ್ದಲ್ಲದೆ, ಅರಸೀಕೆರೆ ಠಾಣೆಗೂ ಮಾಹಿತಿ ನೀಡಿ, ಆಶಾಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಕೋರಿದ್ದರು.
ಅದರಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಅರಸೀಕೆರೆಯಲ್ಲಿದ್ದ ಆಶಾಳನ್ನು ವಶಕ್ಕೆ ಪಡೆದು ವಿಚಾರಣೆೆಗೊಳಪಡಿಸುವುದರೊಂದಿಗೆ ಕೊಲೆಯ ನಿಗೂಢತೆ ಬಯಲಾಗಿದೆ. ಹತ್ಯೆಗೊಳಗಾದ ಲಿಂಗರಾಜು ಮತ್ತು ಆಶಾ ಅವರು ತಲಕಾವೇರಿ ಕ್ಷೇತ್ರಕ್ಕೆ ಬಂದಿರುವುದು ಸಿಸಿ ಟಿವಿಗಳಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ