×
Ad

ಹುದ್ದೆ ಖಾಯಂಗೊಳಿಸಲು ಆಗ್ರಹಿಸಿ ಧರಣಿ

Update: 2016-04-28 22:08 IST

ಶಿವಮೊಗ್ಗ,ಎ.28: ವೇತನ ಪರಿಷ್ಕರಣೆ, ಹುದ್ದೆ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ವಸತಿ ಶಾಲೆ ಮತ್ತು ವಸತಿ ನಿಲಯಗಳ ಬೋಧಕೇತರ ಸಿಬ್ಬಂದಿ ಒಕ್ಕೂಟವು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ತದನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಪತ್ರ ಅರ್ಪಿಸಿತು. ಕಳೆದ ಸರಿಸುಮಾರು 15 ವರ್ಷಗಳಿಂದ 25 ಸಾವಿರಕ್ಕೂ ಅಧಿಕ ಜನರು ಹೊರಗುತ್ತಿಗೆ ಆಧಾರದ ಮೇಲೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅಧೀನದಲ್ಲಿರುವ ಹಿಂದುಳಿದ, ಅಲ್ಪಸಂಖ್ಯಾತ, ಗಿರಿಜನ, ಆಶ್ರಮ, ಏಕಲವ್ಯ ವಸತಿ ಶಾಲೆ ಹಾಗೂ ಹಾಸ್ಟೆಲ್‌ಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 ಆದರೆ ಕಾರ್ಮಿಕ ನಿಯಮಗಳಿಗೆ ಅನುಗುಣವಾಗಿ ಕೊಡಬೇಕಾದ ಯಾವುದೇ ಸೌಲಭ್ಯ ಕಲ್ಪಿಸದೆ ವಂಚಿಸಿಕೊಂಡು ಬರಲಾಗುತ್ತಿದೆ. ವೇತನ ನೀಡಿಕೆಯಲ್ಲಿಯೂ ತಾರತಮ್ಯ ಧೋರಣೆ ಅನುಸರಿಸಿಕೊಂಡು ಬರಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ವೇತನ ನೀಡದೆ ಸತಾಯಿಸಲಾಗುತ್ತಿದೆ. ಇದರಿಂದ ಜೀವನ ನಡೆಸುವುದು ದುಸ್ತರವಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ದಿನಗೂಲಿ ಕಾರ್ಮಿಕರ ಕಲ್ಯಾಣ ಕಾಯ್ದೆ - 2012 ರಲ್ಲಿರುವ ನ್ಯೂನತೆ ಸರಿಪಡಿಸಲು ಸೂಕ್ತ ತಿದ್ದುಪಡಿ ತರಬೇಕು. ಹೊರಗುತ್ತಿಗೆಯ ಮೂಲಕ ಕಾರ್ಮಿಕರ ನೇಮಕಾತಿ ರದ್ದುಪಡಿಸಬೇಕು. ಪ್ರಸ್ತುತ ವಸತಿ ಶಾಲೆ-ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಖಾಯಂಗೊಳಿಸಬೇಕು. ಖಾಯಂಗೊಳಿಸಲು ವಿದ್ಯಾರ್ಹತೆಯ ಮಾನದಂಡ ಅನುಸರಣೆ ಮಾಡದೆ ಅನುಭವಕ್ಕೆ ಆದ್ಯತೆ ಕೊಡಬೇಕು. ಈ ಹಿನ್ನೆಲೆಯಲ್ಲಿ 4 ನೆ ತರಗತಿಗೆ ವಿದ್ಯಾರ್ಹತೆ ಸೀಮಿತಗೊಳಿಸಬೇಕು. ಏಜೆನ್ಸಿಯ ಅಡಿಯಲ್ಲಿ ಕೆಲಸ ಮಾಡಿದ ಅವಧಿಯನ್ನು ದಿನಗೂಲಿ ಅವಧಿಯೆಂದು ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಉನ್ನತ ಅಧಿಕಾರಿಗಳ ಸಭೆೆ ಕರೆದು ಸಮಾಲೋಚನೆ ನಡೆಸಬೇಕು. ನ್ಯಾಯಯುತವಾಗಿರುವ ವಸತಿ ಶಾಲೆ - ನಿಲಯಗಳ ಬೋಧಕೇತರ ಸಿಬ್ಬಂದಿ ಬೇಡಿಕೆ ಗಳ ಈಡೇರಿಕೆಗೆ ಕಾಲಮಿತಿಯಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಸ್ವರೂಪದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ರಾಧಾ ಸುಂದರೇಶ್, ಮುಖಂಡರಾದ ಅನಿಲ್‌ಕುಮಾರ್, ನಾಗರತ್ನಾ, ಅರುಣ್, ಚಿದಂಬರ, ಸಂತೋಷ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News