ರಿಯಾಯಿತಿ ದರದಲ್ಲಿ ಮಾರಾಟ: ಶಾಮನೂರು
ಬೆಂಗಳೂರು, ಎ. 28: ಮಧ್ಯವರ್ತಿಗಳಿಂದ ಆಗುವ ತೊಂದರೆಗಳನ್ನು ತಪ್ಪಿಸಲು ಹಣ್ಣು ಮತ್ತು ತರಕಾರಿಗಳನ್ನು ಹಾಪ್‌ಕಾಮ್ಸ್ ಮೂಲಕವೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಮತ್ತು ಕೃಷಿ ಮಾರಾಟ ಇಲಾಖೆ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಗುರುವಾರ ನಗರದ ಲಾಲ್‌ಬಾಗ್ ಗಾಜಿನಮನೆ ಸಮೀಪ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ಹಾಗೂ ಹಾಪ್‌ಕಾಮ್ಸ್ ಸಹಯೋಗದೊಂದಿಗೆ ಆಯೋಜಿಸಿದ್ದ, ‘ಸೇಬು ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಮತ್ತು ಚೀನಾ ದೇಶದ ನಡುವೆ ದ್ವಿಪಕ್ಷೀಯ ಮಾತುಕತೆ ವೇಳೆ ಆದ ಒಪ್ಪಂದದ ಅನ್ವಯ ಆ ದೇಶದ ವೈವಿಧ್ಯಮಯ ಸೇಬುಗಳನ್ನು ಆಮದು ಮಾಡಿಕೊಂಡು ಇಲ್ಲಿಂದ ಮಾವು, ಬಾಳೆ ಹಣ್ಣುಗಳನ್ನು ರಫ್ತು ಮಾಡುವ ಪ್ರಕ್ರಿಯೆಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ ಎಂದು ಅವರು ತಿಳಿಸಿದರು.
ಚೀನಾ ದೇಶದ ಸೇಬು ಹಣ್ಣುಗಳು ಆರೋಗ್ಯವನ್ನು ಕಾಪಾಡಲಿದ್ದು, ಹೆಚ್ಚು ಹೆಚ್ಚು ಹಣ್ಣುಗಳನ್ನು ತರಿಸಿಕೊಂಡು, ಆದಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಲು ಪ್ರಯತ್ನಿಸಲಾಗುವುದು. ಅದೇ ರೀತಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚೀನಾ ದೇಶವು ಪ್ರತಿವರ್ಷ 3 ಕೋಟಿ 32 ಲಕ್ಷ ಟನ್ ಸೇಬು ಮಾರಾಟ ಮಾಡುತ್ತಿದೆ. ಅಂದರೆ, ವರ್ಷದ 12 ತಿಂಗಳು ಸಹ ಚೀನಾದಲ್ಲಿ ಸೇಬು ಬೆಳೆಯಲಾಗುತ್ತಿದೆ. ಭಾರತದಲ್ಲಿ 21 ಲಕ್ಷದ 61 ಸಾವಿರದ 400 ಟನ್ ಸೇಬು ಹಣ್ಣುಗಳನ್ನು ಬೆಳೆಯಲಾಗುತ್ತಿದೆ ಎಂದು ಶಾಮನೂರು ವಿವರಿಸಿದರು.
ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಿ.ಕೃಷ್ಣ ಮಾತನಾಡಿ, ಚೀನಾ ದೇಶದಿಂದ 50 ಪ್ರತಿನಿಧಿಗಳು ಈ ಉದ್ದೇಶಕ್ಕಾಗಿಯೇ ಆಗಮಿಸಿದ್ದಾರೆ. 15 ಅಂಗಡಿಗಳಲ್ಲಿ ತಮ್ಮ ದೇಶದ ವೈವಿಧ್ಯಮಯ ಸೇಬುಗಳನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ಹೇಳಿದರು.
ಇತಿಹಾಸ ಸೃಷಿಸಿದ ತೋಟಗಾರಿಕೆ ಇಲಾಖೆ:
ತೋಟಗಾರಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಚೀನಾ ರಾಷ್ಟ್ರದ 15ಕ್ಕೂ ಹೆಚ್ಚು ವಿವಿಧ ತಳಿಯ ಸೇಬುಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಾಲ್‌ಬಾಗ್ ಗಾಜಿನ ಮನೆ ಸಮೀಪದಲ್ಲಿ ಪ್ರದರ್ಶನ ಮತ್ತು ಮಾರಾಟವನ್ನು ಸಜ್ಜುಗೊಳಿಸಲಾಗಿದೆ.
ಚೈನಾ ಪೂಜಿ ಸೇಬು, ಗೋಲ್ಡನ್ ಸೇಬು, ಯುಎಸ್ ಸೇಬು, ಇರಾನಿ ಸೇಬು ಸೇರಿದಂತೆ ವಿವಿಧ ರೀತಿಯ ರುಚಿ ನೀಡುವ 15ಕ್ಕೂ ಹೆಚ್ಚು ತರಹೇವಾರಿ ಸೇಬುಗಳು ಪ್ರದರ್ಶನದಲ್ಲಿದ್ದು, ಪ್ರತಿ ಕೆ.ಜಿ. 1ಕ್ಕೆ 126 ರೂ. ನಿಂದ 166 ರೂ.ಗೆ ದರ ನಿಗದಿಪಡಿಸಲಾಗಿದೆ.
ಚೀನಾ ದೇಶದ ವೈನಮ್ ಮುನ್ಸಿಪಲ್ ಪೀಪಲ್ಸ್ ಗೌರ್ನಮೆಂಟ್‌ನ ಉಪ ಕಾರ್ಯದರ್ಶಿ ವಾಂಗ್ ಹೈ ಫೆಂಗ್, ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸನ್, ಉಪಾಧ್ಯಕ್ಷ ಡಿ.ಮುನೇಗೌಡ ಸೇರಿ ಪ್ರಮುಖರು ಉಪಸ್ಥಿತರಿದ್ದರು.