ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು, ಎ. 28: ರಾಯಚೂರು ಜಿಲ್ಲೆಯಲ್ಲಿನ ರಾಜೋಳಿ ಬಂಡ ತಿರುವು ನೀರಾವರಿ ಯೋಜನೆಯಿಂದ ಕರ್ನಾಟಕವು ಸೇರಿದಂತೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ನೀರಾವರಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ತೆಲಂಗಾಣ ನೀರಾವರಿ ಸಚಿವ ಹರೀಶ್ ರಾವ್ ನೇತೃತ್ವದ ನಿಯೋಗ ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇದು ತುಂಗಭದ್ರಾ ನದಿಯ ಯೋಜನೆಯಾಗಿದ್ದು, ತೆಲಂಗಾಣದ ಆಲಂಬೂರ್, ಗದ್ದಾಲ್ ತಾಲೂಕಿನ 75 ಗ್ರಾಮಗಳಿಗೆ ಹಾಗೂ ಮಾನ್ವಿ ತಾಲೂಕಿನ 15ಗ್ರಾಮಗಳಿಗೆ, ಆಂಧ್ರಪ್ರದೇಶ ಕರ್ನೂಲ್ ತಾಲೂಕಿನ ನಾಲ್ಕು ಗ್ರಾಮಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದರು.
ರಾಜ್ಯದಲ್ಲಿ ಜೂನ್ ಅಂತ್ಯದವರೆಗೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಜಲಾಶಯಗಳಲ್ಲಿ ನೀರು ಖಾಲಿಯಾದಲ್ಲಿ ಮಾತ್ರ ಡೆಡ್ ಸ್ಟೋರೆಜ್ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮೇಕೆದಾಟು ಯೋಜನೆ ಸಂಬಂಧ ಯೋಜನಾ ವರದಿ ಸಿದ್ಧಗೊಂಡಿದ್ದು, ಮೇ ತಿಂಗಳಲ್ಲಿ ಕೇಂದ್ರ ಜಲ ಆಯೋಗಕ್ಕೆ ಈ ವರದಿಯನ್ನು ಅನುಮತಿಗಾಗಿ ಸಲ್ಲಿಸಲಾಗುವುದು. ಮೇಕೆದಾಟು ನೀರಾವರಿ ಯೋಜನೆ ಪೂರ್ಣಗೊಂಡಲ್ಲಿ ಸುಮಾರು 60 ಟಿಎಂಸಿ ನೀರು ಸಂಗ್ರಹಣೆಯಾಗಲಿದೆ. ಈ ಯೋಜನೆಗೆ ಸುಮಾರು 5ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ನಾರಾಯಣ ಪುರ ಡ್ಯಾಂ ನಿಂದ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಗೆ ಮೂರು ಟಿಎಂಟಿ ನೀರು ಬಿಡುವಂತೆ ತೆಲಂಗಾಣ ನೀರಾವರಿ ಸಚಿವ ಹರೀಶ್ ರಾವ್ ನೇತೃತ್ವದ ನಿಯೋಗ ಮನವಿ ಮಾಡಿದ್ದಾರೆ. ಈ ಸಂಬಂಧ ಸಿಎಂ ಜೊತೆ ಚರ್ಚಿಸಿ ಮಾನವೀಯ ನೆಲೆಯಲ್ಲಿ ನೀರು ಬಿಡುವ ಸಂಬಂಧ ತೀರ್ಮಾನ ಮಾಡಲಾಗುವುದು ಎಂದರು.
ಉದ್ದೇಶಿತ ರಾಜೋಳಿ ಬಂಡ ತಿರುವ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಮನವಿ ಮಾಡಿದ್ದೇವೆ. ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮುಂಬರುವ ದಿನಗಳಲ್ಲಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದರು.