×
Ad

ಕುಡಿಯುವ ನೀರಿಗೆ ಹೆಚ್ಚುವರಿ ಅನುದಾನ: ಶ್ರೀನಿವಾಸ್ ಪ್ರಸಾದ್

Update: 2016-04-28 23:25 IST

ಬೆಂಗಳೂರು, ಎ. 28: ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸರಕಾರ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದೆ ಎಂದು ಕಂದಾಯ ಸಚಿವರು ಹಾಗೂ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
  ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವ ಸಂಪುಟದ ಉಪ ಸಮಿತಿಯ ಸದಸ್ಯರೊಂದಿಗೆ ಬೆಂ.ಗ್ರಾ.ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಬೆಂ.ಗ್ರಾ.ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಸಮಸ್ಯೆಯನ್ನು ಎದುರಿಸಲು ಜಿಲ್ಲೆಯಲ್ಲಿ ಕೈಗೊಂಡಿರುವ ಪೂರ್ವ ಸಿದ್ಧತೆ ಹಾಗೂ ಅಭಿವೃದ್ಧಿ ಕಾರ್ಯಗಳ ಮಾಹಿತಿ ಆಲಿಸಿದ ಅವರು, ಜಿಲ್ಲೆಯಲ್ಲಿನ ಸಮಸ್ಯೆಯನ್ನು ನಿವಾರಿಸಲು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ಅನುದಾನ ನೀಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಣಕಾಸಿನ ಕೊರತೆಯಿಲ್ಲ. ಜನರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ತಿಳಿಸಿದರು.
 ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ. ವಿದ್ಯುತ್ ಸಮಸ್ಯೆ ಉಲ್ಬಣಿಸಿದೆ. ರಾಜ್ಯದ 137 ತಾಲೂಕುಗಳಲ್ಲಿ ತೀವ್ರ ಬರ ತಲೆದೋರಿದೆ. ಈ ಎಲ್ಲ ಸಮಸ್ಯೆಯನ್ನು ಎದುರಿಸಲು ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.
ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಹೆಚ್ಚುವರಿ ಅನುದಾನ ಬೇಕಾಗುವುದರಿಂದ ಕೂಡಲೇ ಪ್ರತಿ ತಾಲೂಕಿಗೆ 50 ಲಕ್ಷ ರೂ.ನಂತೆ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು 10ಕೋಟಿ ರೂ.ಅನುದಾನ ಲಭ್ಯವಿದೆಯಾದರೂ, ಈಗಾಗಲೇ ಕೊರೆದಿರುವ ಬೋರ್‌ವೆಲ್‌ಗಳ ಬಿಲ್ ಪಾವತಿಸಲು 5ಕೋಟಿ ರೂ.ವೆಚ್ಚವಾಗಲಿದೆ. ಜೊತೆಗೆ ಸಮಸ್ಯಾತ್ಮಕ ಗ್ರಾಮಗಳಿಗೆ ತುರ್ತಾಗಿ ನೀರು ಒದಸಲು ಕೊಳವೆ ಬಾವಿಗಳನ್ನು ಕೊರೆಯಬೇಕಾಗಿರುವುದರಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದರು.
ಆರಂಭಕ್ಕೆ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕೈಗೊಂಡಿರುವ ಸಿದ್ಧತೆ ಮತ್ತು ಕ್ರಮಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಜಿಲ್ಲೆಯ 973ಗ್ರಾಮಗಳ ಪೈಕಿ 50ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ಪೈಕಿ 41 ಗ್ರಾಮಗಳಿಗೆ ಟ್ಯಾಂಕರ್ ಮೂಲಕ 9ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
 ಜಿಲ್ಲೆಯ 5 ಪಟ್ಟಣ ಪ್ರದೇಶಗಳಲ್ಲಿ 123 ವಾರ್ಡ್‌ಗಳಿದ್ದು, ಈ ಪೈಕಿ ದೇವನಹಳ್ಳಿಯ 7 ವಾರ್ಡ್, ನೆಲಮಂಗಲದ 3 ವಾರ್ಡ್ ಹಾಗೂ ವಿಜಯಪುರದ 20 ವಾರ್ಡ್ ಸೇರಿ ಒಟ್ಟು 30 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಿದ್ದು, ಹೊಸದಾಗಿ 15 ಬೋರ್‌ವೆಲ್ ಕೊರೆಸಿ ಜನರಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
 ಪ್ರಸ್ತುತ ಉಲ್ಬಣಿಸಿರುವ ನೀರಿನ ಸಮಸ್ಯೆಯನ್ನು ನಿಭಾಯಿಸಲು 150ಲಕ್ಷ ರೂ. ವೆಚ್ಚದಲ್ಲಿ 105 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲಾಗುವುದು. ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲು 268.76 ಲಕ್ಷ ರೂ.ಕುಡಿಯುವ ನೀರಿನ ಪುನಶ್ಚೇತನ ಕಾಮಗಾರಿಗಳಿಗೆ 198.76 ಲಕ್ಷ ರೂ. ಬರದಿಂದ ಬೆಳೆ ನಷ್ಟಕ್ಕೀಡಾದ ರೈತರಿಗೆ ಇನ್‌ಫುಲ್ ಸಬ್ಸಿಡಿ ನೀಡಲು 537.90 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನೀರಿನ ಸಮಸ್ಯೆಯನ್ನು ನಿಭಾಯಿಸಲು ಮುಂಜಾಗ್ರತೆ ವಹಿಸಿ 593ಲಕ್ಷ ರೂ. ವೆಚ್ಚದಲ್ಲಿ 207 ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಎಸ್.ಪಾಲಯ್ಯ ತಿಳಿಸಿದರು.
ರೋಷನ್ ಬೇಗ್, ಆಂಜನೇಯ, ಶಾಸಕರಾದ ಎಂಟಿಬಿ ನಾಗರಾಜ್, ವೆಂಕಟರಮಣಯ್ಯ, ಪಿಳ್ಳಮುನಿ ಶ್ಯಾಮಪ್ಪ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್, ಬಿ. ಬಸವರಾಜು, ಪ್ರಾದೇಶಿಕ ಆಯುಕ್ತೆ ಜಯಂತಿ, ಜಿ.ಪಂ. ಸಿಇಓ ಸಿ.ಪಿ. ಶೈಲಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News