×
Ad

ರೈತರ ಸಮಸ್ಯೆ ಬಗೆಹರಿಸದಿದ್ದರೆ ‘ಸಿಎಂ ಹಠಾವೋ’ ಚಳವಳಿ

Update: 2016-04-28 23:28 IST

ಕಲಬುರಗಿ, ಎ.28: ಭೀಕರ ಬರಗಾಲದಿಂದ ತತ್ತರಿಸಿರುವ ರೈತ ಸಮುದಾಯದ ಸಮಸ್ಯೆಗಳನ್ನು ರಾಜ್ಯ ಸರಕಾರ ಬಗೆಹರಿಸದಿದ್ದರೆ ‘ಸಿಎಂ ಹಠಾವೋ’(ಮುಖ್ಯಮಂತ್ರಿ ಬದಲಾಯಿಸಿ) ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಆಳಂದ ತಾಲೂಕಿನ ಜಿಡಗಾ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಕೈಗೊಂಡಿರುವ ಬರ ಪ್ರವಾಸ ಮುಕ್ತಾಯ ಗೊಂಡ ನಂತರ ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ. ಆನಂತರ 15 ದಿನಗಳಲ್ಲಿ ರೈತರ ಬವಣೆಯನ್ನು ತಪ್ಪಿಸದಿದ್ದರೆ ಬೆಂಗಳೂರಿನಲ್ಲಿ ಸಿಎಂ ಹಠಾವೋ ಚಳವಳಿ ಪ್ರಾರಂಭ ಮಾಡುತ್ತೇವೆ ಎಂದರು.
ರಾಜ್ಯದಲ್ಲಿರುವ ಭೀಕರ ಬರಗಾಲದ ಬಗ್ಗೆ ಸರಕಾರಕ್ಕೆ ಗಂಭೀರತೆ ಇಲ್ಲ. ಜನರ ಪಾಲಿಗೆ ಮುಖ್ಯಮಂತ್ರಿ ಬದುಕಿದ್ದಾರೋ, ಸತ್ತಿದ್ದಾರೋ ಎಂಬುದೇ ಗೊತ್ತಾಗುತ್ತಿಲ್ಲ. ಬರ ಪರಿಹಾರಕ್ಕೆ ಕೇಂದ್ರ ಸರಕಾರ ನೀಡಿರುವ ಅನುದಾನವನ್ನು ಸಂಪೂರ್ಣ ಖರ್ಚು ಮಾಡದೆ ಹೆಚ್ಚಿನ ಅನುದಾನ ಕೇಳಿ ಜನರ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಕೇಳಿದರೆ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ನೀಡಲು ಸಿದ್ಧವಿದೆ. ಬರ ನಿರ್ವಹಣೆ ನೆಪದಲ್ಲಿ ಅಧಿಕಾರಿಗಳ ಅಮಾನತ್ತು ಕೇವಲ ಪ್ರಚಾರಕ್ಕಾಗಿ ನಡೆದಿದೆಯೆ ಹೊರತು, ಆಡಳಿತದಲ್ಲಿ ಬಿಗಿ ತರುವ ಉದ್ದೇಶದಿಂದಲ್ಲ ಎಂದು ಅವರು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿ ಅಲುಗಾಡುತ್ತಿದೆ. ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ, ಜನಾರ್ದನ ಪೂಜಾರಿ ಸೇರಿದಂತೆ ಸ್ವಪಕ್ಷೀಯರೆ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿ, ಮುಖ್ಯಮಂತ್ರಿಗೆ ರಾಜ್ಯದಲ್ಲಿನ ಬರಪರಿಸ್ಥಿತಿ ಬಗ್ಗೆ ಗಂಭೀರತೆಯಿಲ್ಲ ಎಂದು ಯಡಿಯೂರಪ್ಪ ದೂರಿದರು.
ಲೋಕಾಯುಕ್ತ ಸಂಸ್ಥೆಗೆ ಉತ್ತಮವಾದ ನ್ಯಾಯಮೂರ್ತಿಯನ್ನು ನೇಮಕ ಮಾಡಲು ಈ ಸರಕಾರಕ್ಕೆ ಸಾಧ್ಯವಾಗಿಲ್ಲ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಮುಖ್ಯಮಂತ್ರಿ ಹೊರಟಿದ್ದಾರೆ. ಭ್ರಷ್ಟಾಚಾರವನ್ನು ನಿಯಂತ್ರಿಸಲು ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪನೆ ಮಾಡಿಲ್ಲ. ಭ್ರಷ್ಟರ ರಕ್ಷಣೆಗಾಗಿ ಈ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ ಎಂದು ಅವರು ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News