ಕುಡಿಯುವ ನೀರು ಯೋಜನೆಗೆ ಅಗತ್ಯ ವಿದ್ಯುತ್: ಡಿ. ಕೆ. ಶಿವಕುಮಾರ್
ಬೆಂಗಳೂರು, ಎ. 28: ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ವಿದ್ಯುತ್ ಸಂಪರ್ಕದ ಬೇಡಿಕೆ ಬಂದ ಇಪ್ಪತ್ತ್ನಾಲ್ಕು ಗಂಟೆಗಳ ಒಳಗಾಗಿ ವಿದ್ಯುತ್ ಸರಬರಾಜು ಮಾಡುವಂತೆ ಎಲ್ಲ ‘ಎಸ್ಕಾಂ’ಗಳ ಅಧಿಕಾರಿಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವಿದ್ಯುತ್ ಬೇಡಿಕೆಗಳಿಗೆ ಸಂಬಂಧಿಸಿದಂತೆ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ರಾಜ್ಯದಲ್ಲಿ ಎಲ್ಲಿಯೂ ವಿದ್ಯುತ್ ಸಮಸ್ಯೆ ಎದುರಾಗಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ ಸುಮಾರು 9ಬೇಡಿಕೆಗಳನ್ನು ತಕ್ಷಣ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಡೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ, ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ ಹಾಗೂ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಭರವಸೆ ನೀಡಿದರು.
ಕಡೂರು ಕ್ಷೇತ್ರ ವ್ಯಾಪ್ತಿಯ ಬುಕ್ಕಸಾಗರ, ಅಂತರಗಟ್ಟೆ, ಕುಂಕನಾಡು ಗ್ರಾಮಗಳಿಗೆ ಪ್ರತ್ಯೇಕ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ವೈಎಸ್‌ವಿ ದತ್ತ ರಾಜೀನಾಮೆಗೆ ಮುಂದಾಗಿದ್ದರು. ಆ ವೇಳೆ ಉತ್ತರಿಸಿದ ಇಂಧನ ಸಚಿವ ಶಿವಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿಂದು ಸಭೆ ನಡೆಸಲಾಯಿತು. ಕಡೂರು ಕ್ಷೇತ್ರದ ಶಾಸಕ ವೈ.ಎಸ್.ವಿ.ದತ್ತ, ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.