ಇಸಾಗೆ ವೀಸಾ ರದ್ದತಿಯ ಹಿಂದಿನ ಡ್ರಾಮಾ...

Update: 2016-04-28 18:06 GMT

   ಚೀನಾವು ‘ಭಯೋತ್ಪಾದಕ’ನೆಂದೇ ಪರಿಗಣಿಸಿರುವ ಉಯಿಗುರ್ ಪಂಗಡದ ನಾಯಕ ದೋಲ್ಕನ್ ಇಸಾಗೆ, ಭಾರತ ಮೊದಲು ವೀಸಾ ನೀಡಿದ್ದರೂ, ಆನಂತರ ಅದನ್ನು ರದ್ದುಪಡಿಸಿದ ವಿದ್ಯಮಾನಗಳ ಹಿಂದೆ ಒಂದು ಮಹಾನಾಟಕವೇ ನಡೆದಿತ್ತು. ಅಮೆರಿಕ ಹಾಗೂ ಪಾಕಿಸ್ತಾನಗಳು ಕೂಡಾ ಆ ನಾಟಕದ ಪಾತ್ರಧಾರಿಗಳಾಗಿದ್ದವು.

ವಿಶ್ವ ಉಯಿಗುರ್ ಕಾಂಗ್ರೆಸ್ ನಾಯಕರಾದ ದೋಲ್ಕನ್ ಇಸಾ ಹಾಗೂ ಉಮರ್ ಕನಾತ್ ಅವರಿಗೆ ಭಾರತ ಮೊದಲು ವೀಸಾ ನೀಡಿ, ಆನಂತರ ರದ್ದುಗೊಳಿಸಿದ ಕುರಿತಾದ ವಿವಾದವು ಸದ್ಯಕ್ಕೆ ತಣ್ಣಗಾಗುವ ಹಾಗೆ ಕಾಣುತ್ತಿಲ್ಲ. ಆರಂಭದಲ್ಲಿ ಈ ವೀಸಾಗಳನ್ನು ಸಂಬಂಧಪಟ್ಟ ಎಲ್ಲಾ ಪಕ್ಷಗಳ ಪೂರ್ವೋತ್ತರಗಳನ್ನು ಗಮನಿಸಿಯೇ ನೀಡಲಾಗಿತ್ತು.
 ಪೂರ್ವ ತುರ್ಕಿಸ್ತಾನ (ಕ್ಸಿನ್‌ಜಿಯಾಂಗ್, ಚೀನಾ) ಹಾಗೂ ವಿದೇಶಗಳಲ್ಲಿರುವ ಉಯಿಗುರ್ ಜನತೆಯ ಸಾಮೂಹಿಕ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಅಂತಾರಾಷ್ಟ್ರೀಯ ಸಂಘಟನೆ ತಾನೆಂದು ವಿಶ್ವ ಉಯಿಗುರ್ ಕಾಂಗ್ರೆಸ್ ತನ್ನನ್ನು ಬಣ್ಣಿಸಿಕೊಂಡಿದೆ.ಉಯಿಗುರ್ ಮುಸ್ಲಿಂ ಜನಾಂಗೀಯರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಶಾಂತಿಯುತ, ಅಹಿಂಸಾತ್ಮಕ ಹಾಗೂ ಪ್ರಜಾತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಪೂರ್ವ ತುರ್ಕಿಸ್ತಾನದ ರಾಜಕೀಯ ಭವಿಷ್ಯವನ್ನು ರೂಪಿಸುವುದೇ ವಿಶ್ವ ಉಯಿಗುರ್ ಕಾಂಗ್ರೆಸ್‌ನ ಪ್ರಧಾನ ಗುರಿಯಾಗಿದೆ.
   ವಿಶ್ವ ಉಯಿಗುರ್ ಕಾಂಗ್ರೆಸ್ ವಾಶಿಂಗ್ಟನ್‌ನಲ್ಲಿದ್ದು ಕೊಂಡು ಕಾರ್ಯಾಚರಿಸುತ್ತಿದೆ. ಜರ್ಮನಿಯಲ್ಲೂ ಅದು ಅಸ್ತಿತ್ವವನ್ನು ಹೊಂದಿದೆ. ರಬಿಯಾ ಖಾದಿರ್‌ಈ ಸಂಘಟನೆಯ ನಾಯಕಿ. ಓರ್ವ ಯಶಸ್ವಿ ಉದ್ಯಮಿಯಾದ ರಬಿಯಾ ಖಾದಿರ್ ಒಂದು ಸಮಯದಲ್ಲಿ ಚೀನಾದ ಐವರು ಅತಿ ಶ್ರೀಮಂತರಲ್ಲಿ ಒಬ್ಬರಾಗಿದ್ದರು. ಖಾದಿರ್ ಮೊದಲಿಗೆ ಚೀನಾ ಸರಕಾರದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಮತ್ತು ಒಂದು ಬಾರಿಗೆ ಚೀನಾದ ಸಂಸತ್ತಾಗಿರುವ ರಾಷ್ಟ್ರೀಯ ಜನತಾ ಕಾಂಗ್ರೆಸ್‌ನ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದರು. 1995ರಲ್ಲಿ ನಡೆದ ವಿಶ್ವಸಂಸ್ಥೆಯ 4ನೆ ಜಾಗತಿಕ ಮಹಿಳಾ ಸಮ್ಮೇಳನದಲ್ಲಿ ಚೀನಾದ ಅಧಿಕೃತ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಹೋರಾಟದ ಕೆಚ್ಚನ್ನು ಮೈಗೂಡಿಸಿಕೊಂಡಿರುವ ಈ ದಿಟ್ಟ ಮಹಿಳೆ, ಉಯಿಗುರ್ ಜನಾಂಗೀಯ ಮುಸ್ಲಿಮರ ಹಕ್ಕುಗಳಿಗಾಗಿ ಹೋರಾಡಲು 1996ರಲ್ಲಿ ಚೀನಾವನ್ನು ತೊರೆದರು.
  
 ವ್ಯೆಹಾತ್ಮಕ ಬೆಂಬಲ

‘ಇನ್‌ಶಿಯೇಟಿವ್ಸ್ ಫಾರ್ ಚೀನಾ’, ಎಂಬ ಅಷ್ಟೇನೂ ಜನಪ್ರಿಯವಲ್ಲದ ಸಂಘಟನೆಯೊಂದು, ಈ ನಾಟಕೀಯ ವಿದ್ಯಮಾನದ ಕೇಂದ್ರ ಬಿಂದುವಾಗಿದೆ. ಚೀನಾವನ್ನು ಶಾಂತಿಯುತ ವಾಗಿ ಪ್ರಜಾಪ್ರಭುತ್ವದೆಡೆಗೆ ಮುನ್ನಡೆಸಲು ಮುಡಿಪಾಗಿರುವ ಸಂಘಟನೆಯೆಂದು ತನ್ನನ್ನು ಬಣ್ಣಿಸಿಕೊಂಡಿದೆ. ಚೀನಾದ ವಿವಿಧ ಜನಾಂಗೀಯ ಹಾಗೂ ಧಾರ್ಮಿಕ ಗುಂಪುಗಳನ್ನು ಒಗ್ಗೂಡಿ ಸುವ ಉದ್ದೇಶವಿರುವುದಾಗಿ ಹೇಳಿಕೊಂಡು ಅದು, ಭಾರತದ ಧರ್ಮಶಾಲಾ ನಗರದಲ್ಲಿ ಅದು ಅಂತರ್‌ಜನಾಂಗೀಯ ಹಾಗೂ ಅಂತರ್‌ಮತೀಯ ನಾಯಕತ್ವ ಸಮಾವೇಶವನ್ನು ಆಯೋಜಿಸಿತ್ತು. ಈ ಸರಣಿ ಸಮಾವೇಶಕ್ಕೆ ‘ಪ್ರಜಾಪ್ರಭುತ್ವಕ್ಕಾಗಿನ ರಾಷ್ಟ್ರೀಯ ದತ್ತಿನಿಧಿ’ (ಎನ್‌ಇಡಿ) ಎಂಬ ಸಂಸ್ಥೆಯು ಆರ್ಥಿಕ ನೆರವನ್ನು ನೀಡುತ್ತಿದ್ದು, ಪ್ರತಿಯಾಗಿ ಅದು ಅಮೆರಿಕ ಕಾಂಗ್ರೆಸ್‌ನಿಂದ ನಿಧಿಸಹಾಯ ಪಡೆಯುತ್ತಿದೆ.
 ಸ್ವಾತಂತ್ರ ಹಾಗೂ ಮಾನವಹಕ್ಕುಗಳ ರಕ್ಷಣೆಗಾಗಿ, ಹೆಚ್ಚುಕಮ್ಮಿ ಏಕಾಂಗಿಯಾಗಿ ಹಾಗೂ ಪ್ರಚಾರವಿಲ್ಲದೆ ಕಾರ್ಯಾಚರಿಸುತ್ತಿರುವ ಗುಂಪುಗಳನ್ನು ಬೆಂಬಲಿಸುವ ಗುರಿಯನ್ನು ಪ್ರಜಾಪ್ರಭುತ್ವ ಕುರಿತ ರಾಷ್ಟ್ರೀಯ ದತ್ತಿ ಸಂಸ್ಥೆಯು ಹೊಂದಿದೆ. ಸೌದಿ ಅರೇಬಿಯಾ ಹಾಗೂ ಇಸ್ರೇಲ್ ಸೇರಿದಂತೆ ಅಮೆರಿಕದ ಹಲವು ಮಿತ್ರರಾಷ್ಟ್ರಗಳಲ್ಲಿ ಪ್ರಸಕ್ತ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಎನ್‌ಇಡಿ ಹೆಚ್ಚು ಕಾಳಜಿಯನ್ನು ವಹಿಸುತ್ತಿಲ್ಲ. ಆದರೆ ಚೀನಾ ಹಾಗೂ ರಶ್ಯದಂತಹ ಅಮೆರಿಕದ ಪ್ರತಿಸ್ಪರ್ಧಿ ದೇಶಗಳ ಬಗ್ಗೆ ಅದು ತುಂಬಾ ಕಾಳಜಿಯನ್ನು ಹೊಂದಿದೆ. ಅಮೆರಿಕದ ಹಿತಾಸಕ್ತಿಗಳನ್ನು ಬಲಪಡಿಸುವುದೇ ಅದರ ಮುಖ್ಯ ಕಾರ್ಯಸೂಚಿಯಾಗಿದೆ.ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಜೊತೆ ನಿಕಟ ಸಮನ್ವಯತೆಯೊಂದಿಗೆ ಕಾರ್ಯಾಚರಿಸುವ ಈ ಗುಂಪು, ಕಾಲಕಾಲಕ್ಕೆ ಅಮೆರಿಕ ಕಾಂಗ್ರೆಸ್‌ಗೂ ವರದಿಗಳನ್ನು ಸಲ್ಲಿಸುತ್ತಿದೆ.

ಚಿಂತನ ಚಿಲುಮೆಗಳ ಪಾತ್ರ
     ಅಂತರ್ ಜನಾಂಗೀಯ, ಅಂತರ್ ನಾಯಕತ್ವ ಸಮಾವೇಶವು ಭಾರತದಲ್ಲಿ ನಡೆಯಲಿರುವುದು ಆಸಕ್ತಿಕರವಾಗಿದೆ. ಇಂತಹ ಸಮಾವೇಶಗಳಿಗೆ ಭಾರತ ಸರಕಾರದ ಅನುಮತಿಯ ಅಗತ್ಯವಿದೆ. ಹೊಸದಿಲ್ಲಿಯಲ್ಲಿ ಮೋದಿ ಸರಕಾರ ಅಧಿಕಾರಕ್ಕೇರಿದ ಬಳಿಕ ಇಂತಹ ಕೆಲವು ಚಿಂತನ ಸಂಘಟನೆ (ಠಿಜ್ಞಿಠಿಚ್ಞ)   ಗಳ ಪಾತ್ರಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಈ ಪೈಕಿ ವಿವೇಕಾನಂದ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಇಂಡಿಯಾ ಫಸ್ಟ್ ಫೌಂಡೇಶನ್ ಹೆಚ್ಚಿನ ಗಮನಸೆಳೆಯುತ್ತಿವೆ. ಈ ಎರಡೂ ಸಂಘಟನೆಗಳು ಅಟ್ಲಾಂಟಿಕ್ ಕೌನ್ಸಿಲ್, ಹೆರಿಟೇಜ್ ಪ್ರತಿಷ್ಠಾನ, ಜರ್ಮನ್ ಮಾರ್ಶಲ್ ಫಂಡ್ ಹಾಗೂ ಬ್ರೂಕಿಂಗ್ಸ್ ಇನ್ಸಿಟಿಟ್ಯೂಶನ್‌ನಂತಹ ಅಮೆರಿಕ ಮೂಲದ ಹಲವಾರು ಚಿಂತನಚಿಲುಮೆಗಳ ಜೊತೆ ನಿಕಟ ಸಂಪರ್ಕ ಹೊಂದಿವೆ. ಆದರೆ ಇದರಲ್ಲಿ ಅಚ್ಚರಿಯೇನೂ ಇಲ್ಲ. ಎನ್‌ಡಿಎ ಸರಕಾರದ ಆಡಳಿತದಲ್ಲಿ ಅಮೆರಿಕ ಮೂಲದ ಬ್ರೂಕಿಂಗ್ಸ್ ಇನ್ಸಿಟಿಟ್ಯೂಶನ್ ಹಾಗೂ ಕಾರ್ನೆಗಿ ಪ್ರತಿಷ್ಠಾನಗಳು ಕೂಡಾ ತಮ್ಮ ಪ್ರಭಾವವನ್ನು ಬೆಳೆಸಿಕೊಳ್ಳಲು ಈಗ ಹೊಸದಿಲ್ಲಿಯಲ್ಲಿ ತಮ್ಮ ಕಚೇರಿಗಳನ್ನು ತೆರೆದಿವೆ.

ಪುಟ್ಟ ಇತಿಹಾಸ
  ಉಯಿಗುರ್‌ವಿವಾದವನ್ನು ಕೆದಕುವುದರ ಹಿಂದೆ ಕಾರಣವಿಲ್ಲದೆ ಇಲ್ಲ. 1949ರ ಆನಂತರದ ಚೀನಾ ಸಾಮ್ರಾಜ್ಯದಲ್ಲಿ ಟಿಬೆಟ್‌ನಂತೆ, ಕ್ಸಿನ್‌ಜಿಯಾಂಗ್ ಪ್ರಾಂತವನ್ನು ಕೂಡಾ ದುರ್ಬಲಕೊಂಡಿಯೆಂದು ಗ್ರಹಿಸಲಾಗಿತ್ತು. ಈ ಎರಡೂ ಪ್ರಾಂತಗಳು ಚೀನಾದ ಜೊತೆಗಿನ ಭಾರತದ ಮುಂಚೂಣಿ ಗಡಿಪ್ರದೇಶದಲ್ಲಿ ಹರಡಿವೆ. ಕ್ಸಿನ್‌ಜಿಯಾಂಗ್ ಅಥವಾ ಉಯಿಗುರ್ ಮುಸ್ಲಿಂ ಪಂಗಡದ ತಾಯ್ನೆಲವಾದ ಕ್ಸಿನ್‌ಜಿಯಾಂಗ್ ಅಥವಾ ಪೂರ್ವ ತುರ್ಕಿಸ್ತಾನವು, ಜಮ್ಮುಕಾಶ್ಮೀರದ ಲಡಾಕ್ ಜಿಲ್ಲೆಯ ಆಸುಪಾಸಿನಲ್ಲಿದೆ.
    ಟಿಬೆಟ್‌ನ ಹಾಗೆ ಚೀನಾದ ಜೊತೆಗೂ ಕ್ಸಿನ್‌ಜಿಯಾಂಗ್‌ನ ಬಾಂಧವ್ಯ ಕದಡಿದೆ. 1912ರ ಆನಂತರ ಸುನ್ ಯಾತ್ ಸೆನ್ ನೂತನ ಗಣರಾಜ್ಯದ ಸ್ಥಾಪನೆಯನ್ನು ಘೋಷಿಸಿದಾಗ,ಚೀನಾವು ವಸ್ತುಶಃ ಟಿಬೆಟ್ ಹಾಗೂ ಕ್ಸಿನ್‌ಜಿಯಾಂಗ್ ಪ್ರಾಂತದ ಮೇಲೆ ತನ್ನ ಅಧಿಕಾರವನ್ನು ಕಳೆದುಕೊಂಡಿತು. ಚೀನಿ ದಂಡುಗಳನ್ನು ಹೊರದಬ್ಬಲಾಯಿತು ಹಾಗೂ ಸ್ಥಳೀಯ ನಾಯಕತ್ವಗಳು ಆ ಪ್ರಾಂತಗಳ ಮೇಲೆ ಸಂಪೂರ್ಣ ಅಧಿಕಾರವನ್ನು ಸ್ಥಾಪಿಸಿದವು.
   ಟಿಬೆಟ್, ಬೌದ್ಧ ಧರ್ಮಗುರುಗಳ ನಿಯಂತ್ರಣಕ್ಕೊಳಪಟ್ಟರೆ, ಕ್ಸಿನ್‌ಜಿಯಾಂಗ್ ಪ್ರಾಂತವು 1941ರ ತನಕವೂ ಅನೇಕ ಪಾಳೆಗಾರರ ಸ್ವಾಧೀನದಲ್ಲಿತ್ತು. ಆ ಬಳಿಕ ಕೆಎಂಟಿ ಸಂಘಟನೆಯ ಬಂಡುಕೋರ ಶೆಂಗ್‌ಸಿಕಾಲ್ ಎಂಬಾತ ರಶ್ಯನ್ ನಾಯಕ ಕಾಮಿಂತೆರ್ನ್ ಎಂಬಾತನ ಮಾರ್ಗದರ್ಶನದೊಂದಿಗೆ ಕ್ಸಿನ್‌ಜಿಯಾಂಗ್ ಪ್ರಾಂತವನ್ನು ಸೋವಿಯತ್ ಗಣರಾಜ್ಯಕ್ಕೆ ಸೇರ್ಪಡೆಗೊಳಿಸಿದ. ರಶ್ಯನ್ನರು ಅಲ್ಲಿ ಸಂಪೂರ್ಣ ತಮ್ಮ ನಿಯಂತ್ರಣವನ್ನು ಸ್ಥಾಪಿಸಿದರು ಹಾಗೂ ಎಲ್ಲಾ ಅಂತಾರಾಷ್ಟ್ರೀಯ ಬಾಂಧವ್ಯಗಳನ್ನು ಹಾಗೂ ವಾಣಿಜ್ಯವನ್ನು ತಮ್ಮ ತೆಕ್ಕೆಗೆ ಎಳೆದುಕೊಂಡರು..
ಭಾರತದ ಮೇಲೂ ಇದರ ಪರಿಣಾಮಗಳಾದವು. ಚೀನಾ ಹಾಗೂ ಭಾರತ ನಡುವೆ ತಟಸ್ಥ ವಲಯವನ್ನು ಸೃಷ್ಟಿಸಲು ಟಿಶ್ ಆಡಳಿತವು ಅಕ್ಸಾಯ್‌ಚಿನ್ ಪ್ರದೇಶವನ್ನು ಒಳಗೊಂಡಂತೆ ಲಡಾಕ್ ಗಡಿಯನ್ನು ಮುಂದೊತ್ತಬೇಕಾಯಿತು. ಆದರೆ 1949ರಲ್ಲಿ ರಶ್ಯದ ಸರ್ವೋಚ್ಚ ನಾಯಕ ಜೋಸೆಫ್ ಸ್ಟಾಲಿನ್, ಆಗತಾನೆ ಮಾವೊತ್ಸೆ ತುಂಗ್ ಹೊಸತಾಗಿ ರಚಿಸಿದ ಚೀನಾ ಗಣರಾಜ್ಯಕ್ಕೆ ಕ್ಸಿನ್‌ಜಿಯಾಂಗ್ ಪ್ರಾಂತವನ್ನು ಹಸ್ತಾಂತರಿಸಿದರು.ಆಗ ತಾನೇ ಚೀನಾವು ಟಿಬೆಟನ್ನು ಅತಿಕ್ರಮಿಸುವ ಪ್ರಕ್ರಿಯೆ ಕೂಡಾ ಆರಂಭಿಸಿತ್ತು. ಅಕ್ಸಾಯ್‌ಚಿನ್ ಕೂಡಾ ಚೀನಾದ ವಶವಾಯಿತು.

ಪಾಕ್ ನಂಟು
  1949ರಲ್ಲಿ ಕ್ಸಿನ್‌ಜಿಯಾಂಗ್ ಪ್ರಾಂತವು ಸಂಪೂರ್ಣವಾಗಿ ವಿವಿಧ ತುರ್ಕಿಕ್ ರಾಷ್ಟ್ರೀಯತೆಗಳ ಜನರಿಂದ ಕೂಡಿತ್ತು. ಆ ಪೈಕಿ ಉಯಿಗುರ್ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿದ್ದರು.ಹನ್ ಚೀನಿಯರು ಕೇವಲ ಶೇ.6ರಷ್ಟಿದ್ದರು. ಹನ್ ಪಂಗಡದ ಚೀನಿಯರ ಸಂಖ್ಯೆ ಕೇವಲ ಶೇ.6ರಷ್ಟಿತ್ತು. ಆದರೆ ಕ್ಸಿನ್‌ಜಿಯಾಂಗ್ ಚೀನಾದ ವಶವಾದ ಬಳಿಕ ಅಲ್ಲಿನ ಚಿತ್ರಣವೇ ಬದಲಾಯಿತು. ಬೀಜಿಂಗ್ ಆಡಳಿತದ ಪ್ರೋತ್ಸಾಹದೊಂದಿಗೆ ಇತರ ಪ್ರಾಂತ್ಯಗಳಿಂದ ಕ್ಸಿನ್‌ಜಿಯಾಂಗ್‌ಗೆ ಚೀನಿಯರ ವಲಸೆ ನಿರಂತರವಾಗಿ ಮುಂದುವರಿಯಿತು. ಅಲ್ಲಿ ಈಗ ಹನ್ ಚೀನಿಯರ ಪ್ರಮಾಣವು ಶೇ.48ಕ್ಕೇರಿದೆ. ಇವರಲ್ಲಿ ಬಹುತೇಕ ಮಂದಿ, ಕ್ಸಿನ್‌ಜಿಯಾಂಗ್ ರಾಜಧಾನಿ ಉರುಮ್‌ಕಿಯಲ್ಲಿ ಕೇಂದ್ರೀಕೃತಗೊಂದ್ದಾರೆ. ಭಾರತದ ಗಡಿಯ ಆಸುಪಾಸಿನಲ್ಲಿರುವ ಖೋತಾನ್ ಹಾಗೂ ಖಾಶಗರ್ ಗಡಿಯ ಕೆಳಗಿನ ಪ್ರಾಂತಗಳಲ್ಲಿ ಉಯಿಗುರ್ ಮುಸ್ಲಿಮರು ಈಗಲೂ ಬಹುಸಂಖ್ಯಾತರಾಗಿದ್ದಾರೆ.
  ಈ ಪ್ರಾಂತವು ನೈಸರ್ಗಿಕ ಅನಿಲ ಹಾಗೂ ತೈಲ ನಿಕ್ಷೇಪಗಳಿಂದ ಸಮೃದ್ಧವಾಗಿರುವುದರಿಂದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಆದಾಗ್ಯೂ ದುರದೃಷ್ಟವಶಾತ್ ಇದರ ಪ್ರಯೋಜನಗಳು ಅಲ್ಲಿಯ ಜನರಿಗೆ ಸಮಾನವಾಗಿ ಹಂಚಿಕೆಯಾಗಿಲ್ಲ. ಚೀನಿ ಸರಕಾರವು ತಮ್ಮ ನೆಲದ ಸಂಪನ್ಮೂಲಗಳನ್ನು ಸಿಕ್ಕಾಬಟ್ಟೆ ಶೋಷಿಸುತ್ತಿದ್ದು, ಇದರ ಪ್ರಯೋಜನವನ್ನು ವಲಸಿಗ ಹನ್ ಚೀನಿಯರು ಪಡೆದುಕೊಳ್ಳುತ್ತಿದ್ದಾರೆಂಬ ಅಸಮಾಧಾನ ಉಯಿಗುರ್ ಮುಸ್ಲಿಮರಲ್ಲಿ ಬೇರೂರಿದೆ.
  ಕಳೆದ ಸಲ ನಾನು ಯುರುಮ್‌ಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರಿಂದ ಕಿಕ್ಕಿರಿದಿದ್ದ ಹಳೆಯ ಮಾರುಕಟ್ಟೆ ಸ್ಥಳದ ವರ್ತಕರು, ಚೀನಾ ಸರಕಾರದ ತಾರತಮ್ಯದ ಬಗ್ಗೆ ತಮ್ಮ ನೋವನ್ನು ಮುಕ್ತವಾಗಿ ತೋಡಿಕೊಂಡರು. ಕಾರಕೋರಂ ಹೆದ್ದಾರಿ ನಿರ್ಮಾಣದ ಬಳಿಕ ಪಾಕಿಸ್ತಾನದ ಜೊತೆಗಿನ ಬಾಂಧವ್ಯ ವರ್ಧಿಸಿದ ಪರಿಣಾಮವಾಗಿ ಅನೇಕ ಉಯಿಗುರ್ ಮುಸ್ಲಿಮರು ಅಲ್ಪಸ್ವಲ್ಪ ಉರ್ದು ಕೂಡಾ ಮಾತನಾಡುತ್ತಾರೆ. ಉರುಮ್‌ಕಿಯ ಹಲವಾರು ಹೊಟೇಲ್‌ಗಳಲ್ಲಿ ಪಾಕಿಸ್ತಾನಿ ಖಾದ್ಯಗಳ ಜಾಹೀರಾತುಗಳು ರಾರಾಜಿಸುವುದನ್ನು ಕಾಣಬಹುದಾಗಿದೆ.
 ಉಯಿಗುರ್ ಪ್ರಾಂತದೊಂದಿಗೆ ಪಾಕ್ ಸಂಪರ್ಕ ಹೆಚ್ಚಿದ ಪರಿಣಾಮವಾಗಿ, ಚೀನಾಕ್ಕೆ ಪ್ರತಿಕೂಲ ಸನ್ನಿವೇಶ ಕೂಡಾ ಸೃಷ್ಟಿಯಾಗಿದೆ. ಲಶ್ಕರೆ ತಯ್ಯಿಬಾ ಹಾಗೂ ಜಮಾಅತುದ್ದಅವಾ ದಂತಹ ಉಗ್ರಗಾಮಿ ಸಂಘಟನೆಗಳು 4 ಸಾವಿರಕ್ಕೂ ಅಧಿಕ ಮಂದಿ ಉಯಿಗುರ್ ಜನಾಂಗೀಯರಿಗೆ, ಚೀನಾ ಆಡಳಿತದ ವಿರುದ್ಧ ಹೋರಾಟಕ್ಕೆ ತರಬೇತಿ ನೀಡಿದೆ. ಈ ಸಂಘಟನೆಗಳ ಜೊತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ಸಂಪರ್ಕವಿರುವುದು ಕೂಡಾ ಚೀನಾಕ್ಕೆ ತಿಳಿಯದ ವಿಷಯವೇನಲ್ಲ. ಈ ರೀತಿಯ ಸನ್ನಿವೇಶವನ್ನು ಸೃಷ್ಟಿಸುವ ಮೂಲಕ ಚೀನಿಯರು ತಮ್ಮ ತಾಳಕ್ಕೆ ಕುಣಿಯುವಂತೆ ಮಾಡುವುದೇ ಪಾಕ್‌ನ ತಂತ್ರಗಾರಿಕೆಯಾಗಿದೆ.

Writer - ಮೋಹನ್ ಗುರುಸ್ವಾಮಿ

contributor

Editor - ಮೋಹನ್ ಗುರುಸ್ವಾಮಿ

contributor

Similar News