×
Ad

ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಹಾರ: ಚಾಮರಾಜನಗರ ಉದ್ವಿಗ್ನ

Update: 2016-04-28 23:55 IST

ಕಲ್ಲು ತೂರಾಟ: ಹಲವರಿಗೆ ಗಾಯ ನಿಷೇಧಾಜ್ಞೆ ಜಾರಿ

ಚಾಮರಾಜನಗರ, ಎ.28: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬೃಹತ್ ಫ್ಲೆಕ್ಸ್‌ಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದರಿಂದ ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದಲ್ಲಿ ಬಸ್ ನಿಲ್ದಾಣದಲ್ಲಿ ಹಾಕಲಾಗಿದ್ದ ಬೃಹತ್ ಅಂಬೇಡ್ಕರ್ ಫ್ಲೆಕ್ಸ್‌ಗೆ ಕೆಲವು ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದೇ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ. ಹೊಂಗನೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಉಂಟಾದ ಘರ್ಷಣೆಯಿಂದ ಇಪ್ಪತ್ತು ಅಂಗಡಿಗಳು ಬೆಂಕಿಗಾಹುತಿಯಾಗಿವೆ.

ಈ ವೇಳೆ ಎರಡು ಗುಂಪುಗಳ ಜನರ ನಡುವೆ ಕಲ್ಲು ತೂರಾಟ ಉಂಟಾಗಿ ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕಾಗಲವಾಡಿ ಮತ್ತು ಜಿಲ್ಲಾ ಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ವೇಳೆ ಪರಿಸ್ಥಿತಿಯ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿರುವುದು ಕಂಡುಬಂತು. ಎರಡು ಕೋಮಿನ ನಡುವೆ ಉಂಟಾದ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಪ್ರತಿ ಬೀದಿಯಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಜೈನ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆಗೊಳಿಸಿ ನಾಳೆ ಬೆಳಗ್ಗೆ 10 ರತನಕ ಸೆಕ್ಷನ್ 144 ನ್ನು ಜಾರಿಗೊಳಿಸಿದ್ದಾರೆ. ಜಿಲ್ಲಾಧಿಕಾರಿ ಬಿ.ರಾಮು, ಉಪ ವಿಭಾಗಾಧಿಕಾರಿ ಕವಿತಾ, ತಹಶೀಲ್ದಾರ್ ಮಹದೇವು ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ನೆಲೆಸಲು ಸಹಕರಿಸಿದರು.

ಮಾಧ್ಯಮದವರ ಮೇಲೆ ಹಲ್ಲೆ: ಹೊಂಗನೂರು ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ವರದಿ ಮಾಡಲು ಹೋದ ಬಿ.ಟಿವಿ ವರದಿಗಾರ ದಿಲೀಪ್ ಹಾಗೂ ಟಿ.ವಿ. 9 ವರದಿಗಾರ ಮಂಜುನಾಥ್ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News