ಹೆಚ್ಚುತ್ತಿರುವ ಬಿಸಿಲಿನ ತಾಪ: ರಸ್ತೆಗಳು ಖಾಲಿ ಖಾಲಿ
ಮುಹಮ್ಮದ್ ಆರೀಫ್
ಸೊರಬ,ಎ.29: ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ರಸ್ತೆಯಲ್ಲಿ ಜನಸಂಚಾರ ಬಹುತೇಕ ಕಡಿಮೆಯಾಗಿ ರಸ್ತೆಗಳು ಬಿಕೋ ಎನ್ನುತ್ತಿವೆ. ಕಳೆದ ಕೆಲವು ದಿನಗಳಿಂದ ಇಂತಹ ದೃಶ್ಯ ಸಾಮಾನ್ಯವಾಗಿದ್ದು, ಬಿಸಿಲಿಗೆ ಹೆದರಿ ಜನತೆ ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಮಲೆನಾಡಿನ ಜನತೆ ಹಲವು ದಶಕಗಳ ನಂತರದಲ್ಲಿ ಎಂದೂ ಕಂಡರಿಯದ ಬಿಸಿಲಿನ ಝಳಕ್ಕೆ ತತ್ತರಿಸಿದ್ದಾರೆ. ಅಭಿವೃದ್ಧಿ ಹಾಗೂ ನಗರೀಕರಣ ಸೇರಿದಂತೆ ಇತರೆ ಯೋಜನೆಗಳಿಗೆ ತಲೆತಲಾಂತರದಿಂದ ನೆಲೆಯೂರಿದ್ದ ಮರಗಳ ಮಾರಣ ಹೋಮದಿಂದ ಇಂತಹ ಪರಿಸ್ಥಿತಿಯನ್ನು ಅನುಭವಿಸುವಂತಾಗಿದೆ ಎನ್ನುವುದು ಹಿರಿಯರ ಮಾತು. ಒಂದೆಡೆ ಬರಗಾಲ ಜೊತೆ ಜನಜಾನುವಾರುಗಳು ನೀರಿಗಾಗಿ ಅಲೆಯುವಂತಾಗಿದ್ದರೆ, ಸೂರ್ಯ ಶಾಖ ಮತ್ತೊಂದಡೆ ಜನತೆಯನ್ನು ರೋಸಿ ಹೊಗುವಂತೆ ಮಾಡಿದೆ. ಸಾರ್ವಜನಿಕರು ತಮ್ಮ ದೈನಂದಿನ ಸರಕಾರಿ ಕಚೇರಿ ಕೆಲಸಗಳು ಸೇರಿದಂತೆ ಇತರೆ ಕೆಲಸಗಳನ್ನು ಸೂರ್ಯನ ಬಿಸಿಲು ತಟ್ಟುವ ಒಳಗಡೆಯೇ ಮುಗಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ನಿಟ್ಟುಸಿರುವ ಬಿಡುವಂತಹ ಸನ್ನಿವೇಷ ನಿರ್ಮಾಣವಾಗುವುದು ಸಂಜೆಯ ಹೊತ್ತಿನಲ್ಲೆ, ಬಿಸಿಲಿನ ತಾಪದ ಜೊತೆಗೆ ಸಾಲು ಸಾಲು ಮದುವೆ ಸಮಾರಂಭಗಳು ಸಹ ಇರುವುದರಿಂದ ಜನರಿಲ್ಲದೆ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಪರಿಣಾಮ ವ್ಯಾಪಾರ ವಹಿವಾಟಿನಲ್ಲಿ ಇಳಿಕೆ ಕಂಡು ಬರುತ್ತಿದೆ. ಬೆಳಗ್ಗೆಯ ಕೆಲ ಹೊತ್ತು ಮಾತ್ರ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತದೆ. ಮತ್ತೆ ಸೂರ್ಯ ಇಳಿಮುಖನಾಗುತ್ತಿದ್ದಂತೆ ಜನತೆ ಅಂಗಡಿಗಳತ್ತ ಬರುತ್ತಾರೆ ಎನ್ನುತ್ತಾರೆ ಪಟ್ಟಣದ ವರ್ತಕರೊಬ್ಬರು. 41 ಡಿಗ್ರಿ ಸೆಲ್ಸಿಯಸ್ ಆಸುಪಾಸಿನ ಉಷ್ಣಾಂಶ ಶುಕ್ರವಾರ ದಾಖಲಾಗಿದೆ. ಬಿಸಿಲ ಝಳದ ಜೊತೆಗೆ ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಬಿಸಿ ಗಾಳಿಯ ಅನುಭವವಾಗುತ್ತಿದೆ. ಒಟ್ಟಾರೆ ಪಟ್ಟಣ ಸೇರಿದಂತೆ ತಾಲೂಕಿನ ಜನತೆ ಬಿಸಿಲಿನ ತಾಪಕ್ಕೆ ಹಾಗೂ ಬರದ ಛಾಯೆಗೆ ರೋಸಿ ಹೋಗಿದ್ದು, ಮಳೆಗಾಗಿ ಜನತೆ ಹಾತೊರೆಯುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೇಗೆ ಎಂಬ ಚಿಂತೆ ಜನತೆಯಲ್ಲಿ ಮನೆಮಾಡಿದೆ.