ವಾಹನಗಳ ಮೇಲಿನ ಪ್ರಕರಣದಿಂದ ದಂಡ ವಸೂಲಿ
ಕಾರವಾರ, ಎ.29: ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹೊನ್ನಾವರ ಕಚೇರಿಯಿಂದ 2015-16ನೆ ಸಾಲಿನಲ್ಲಿ ಮೋಟಾರು ವಾಹನ ಕಾಯ್ದೆಯಡಿಯಲ್ಲಿ 6,463 ವಾಹನಗಳನ್ನು ತನಿಖೆ ಮಾಡಿ 1,161 ವಾಹನಗಳ ಮೇಲೆ ಪ್ರಕರಣ ದಾಖಲಿಸಿ 94 ಲಕ್ಷ 20 ಸಾವಿರ ರೂ.ಗಿಂತ ಹೆಚ್ಚು ತೆರಿಗೆ ಬಾಕಿ ಮತ್ತು ದಂಡ ವಸೂಲಿ ಮಾಡಿದೆ. ಅದರಲ್ಲಿ 277 ಹೆಚ್ಚಿನ ಭಾರ ಸಾಗಿಸುವ ವಾಹನಗಳ ಮೇಲಿನ ಪ್ರಕರಣದಿಂದ 30 ಲಕ್ಷ 11 ಸಾವಿರ ರೂ. ದಂಡ ಹಾಗೂ 421 ಗ್ಯಾಸ್ ವಾಹನಗಳ ಮೇಲಿನ ಪ್ರಕರಣದಿಂದ 6 ಲಕ್ಷ ರೂ. ದಂಡ ವಸೂಲು ಮಾಡಿದೆ. ಈ ಕಚೇರಿಯು ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿರುತ್ತದೆ. ಆರ್ಥಿಕ ವರ್ಷದಲ್ಲಿ 11,782 ಹೊಸ ವಾಹನಗಳನ್ನು ನೋಂದಣಿ ಮಾಡಲಾಗಿರುತ್ತದೆ. ಹಾಗೂ ಸಾರಿಗೆ ಇಲಾಖೆಯು ಈ ಕಚೇರಿಗೆ 19 ಕೋಟಿ 68 ಲಕ್ಷ ರೂ. ಗುರಿ ನೀಡಿದ್ದು, ಈ ಕಚೇರಿಯಿಂದ 21 ಕೋಟಿ 12 ಲಕ್ಷ ರೂ. ಗಿಂತ ಹೆಚ್ಚು ವಸೂಲಿ ಮಾಡಿ ಶೇ. 110.7ರಷ್ಟು ಹೆಚ್ಚಿನ ಗುರಿ ಸಾಧಿಸಲಾಗಿದೆ ಎಂದು ಹೊನ್ನಾವರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜಿ.ಹಿತ್ತಲಮಕ್ಕಿ ತಿಳಿಸಿದ್ದಾರೆ.