ಅನಾಥ ಮಾನಸಿಕ ಅಸ್ವಸ್ಥರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯ
ಸಾಗರ,ಎ.29: ಪಟ್ಟಣ ವ್ಯಾಪ್ತಿಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದ ಅನಾಥ ಮಾನಸಿಕ ಅಸ್ವಸ್ಥರು ಕಂಡು ಬಂದಿದ್ದು, ಅವರನ್ನು ಸರಕಾರಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸುವಂತೆ ಒತ್ತಾಯಿಸಿ ಶುಕ್ರವಾರ ಜನಜೀವನ್ ಜಾಗೃತ್ ವೇದಿಕೆ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಮ್ಮ ಜನಜೀವನ್ ಜಾಗೃತ್ ವೇದಿಕೆ ವತಿಯಿಂದ ಈತನಕ ಸುಮಾರು 10 ಜನ ಮಾನಸಿಕ ಅಸ್ವಸ್ಥರನ್ನು ಧಾರವಾಡದ ಮಾನಸಿಕ ಕೇಂದ್ರ ಮತ್ತು ಶಿವಮೊಗ್ಗದ ಆಲ್ಕೊಳದಲ್ಲಿರುವ ರಾಜ್ಯ ಮಹಿಳಾ ನಿಲಯಕ್ಕೆ ಸೇರಿಸಿದ್ದೇವೆ. ಈಗ ಪುನಃ ಐದಾರು ಜನ ಮಹಿಳಾ ಮಾನಸಿಕ ಅಸ್ವಸ್ಥರು ಮತ್ತು ಆರೇಳು ಪುರುಷ ಮಾನಸಿಕ ಅಸ್ವಸ್ಥರು ಪೇಟೆಯಲ್ಲಿ ತಿರುಗುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. ಮಾನಸಿಕ ಅಸ್ವಸ್ಥರಿಗೆ ಸಾರ್ವಜನಿಕರ ಜೊತೆ ಪಾನಮತ್ತರಿಂದ ಕಿರುಕುಳ ಉಂಟಾಗುತ್ತಿದೆ. ಯಾವುದೆ ಸಂದರ್ಭದಲ್ಲಿ ಇವರಿಗೆ ತೊಂದರೆ ಹಾಗೂ ದೈಹಿಕ ಹಲ್ಲೆ ನಡೆಯುವ ಸಾಧ್ಯತೆ ಇರುತ್ತದೆ. ಈ ಅನಾಥ ಮಾನಸಿಕ ಅಸ್ವಸ್ಥರ ರಕ್ಷಣೆಗೆ ಪುರ್ನವಸತಿ ಕೇಂದ್ರಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ನಗರಸಭೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅತ್ಯಾಚಾರ ತಡೆ ಕಾನೂನು ರಚನೆ ಶಿಫಾರಸು ಸಮಿತಿಯ ರಾಜ್ಯಾಧ್ಯಕ್ಷ ವಿ.ಎಸ್.ಉಗ್ರಪ್ಪ ಅವರು ಮಡಿಕೇರಿಯಲ್ಲಿ ಎಲ್ಲ ಜಿಲ್ಲೆಯ ಜಿಲ್ಲಾಡಳಿತಕ್ಕೆ ಅನಾಥ ಮಾನಸಿಕ ಅಸ್ವಸ್ಥರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಕಟ್ಟುನಿಟ್ಟಿನ ಆದೇಶ ಮಾಡಿರುತ್ತಾರೆ. ಸಾಗರ ತಾಲೂಕಿನಲ್ಲಿ ಸಹ ಈ ಆದೇಶ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಶಶಿಕಾಂತ್ ಎಂಎಸ್, ನಗರಸಭೆ ಸದಸ್ಯೆ ಪರಿಮಳ, ನಾಗರಾಜ್ ಎಸ್. ಮತ್ತಿತರರು ಉಪಸ್ಥಿತರಿದ್ದರು.