×
Ad

ಕೃಷಿಯಲ್ಲಿ ಹೊಸ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ: ಸಚಿವ ಕೃಷ್ಣ ಭೈರೇಗೌಡ

Update: 2016-04-29 21:53 IST

ಮಡಿಕೇರಿ,ಎ.29: ಕೃಷಿಯಲ್ಲಿ ಹೊಸ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗುವತ್ತ ರೈತರು ಗಮನ ಹರಿಸಬೇಕಿದೆ ಎಂದು ಕೃಷಿ ಸಚಿವರಾದ ಕೃಷ್ಣ ಭೈರೇಗೌಡ ಕರೆ ನೀಡಿದ್ದಾರೆ. ನಬಾರ್ಡ್ ವತಿಯಿಂದ ವೀರಾಜಪೇಟೆ ಬಳಿಯ ಕ್ಲಬ್ ಮಹೇಂದ್ರದಲ್ಲಿ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಹೊಸ ಪದ್ಧತಿ ಕುರಿತು ಶುಕ್ರವಾರ ನಡೆದ ಕಾರ್ಯಾಗಾರ ಮತ್ತು ನಬಾರ್ಡ್‌ನ 64 ನೆ ರಾಷ್ಟ್ರೀಯ ಬ್ಯುಸಿನೆಸ್ ಪ್ಲಾನ್‌ನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಕೃಷಿ ಮಾರುಕಟ್ಟೆ ನೂತನ ಆವಿಷ್ಕಾರಗಳನ್ನು ಹೊಂದಿದ್ದು, ರೈತರಿಗೆ ಅನುಕೂಲ ಕಲ್ಪಿಸಲು ಮಾರುಕಟ್ಟೆ ವ್ಯವಸ್ಥೆಯಲ್ಲ್ಲಿ ಬದಲಾವಣೆ ತರಲಾಗಿದೆ. ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು. ಈಗಾಗಲೇ ನಬಾರ್ಡ್ ವತಿಯಿಂದ ಕೃಷಿ, ಸಣ್ಣ ಪ್ರಮಾಣದ ಕೈಗಾರಿಕೆಗಳು ಗ್ರಾಮೋದ್ಯೋಗ, ಕರಕುಶಲ ಮತ್ತಿತರ ಆರ್ಥಿಕ ಚಟುವಟಿಕೆಗಳ ಮೂಲಕ ಜನರಿಗೆ ಅನೂಕೂಲವಾಗಿದೆ. ರಾಜ್ಯದಲ್ಲಿ ರೈತರಿಗೆ ಅನೂಕೂಲವಾಗುವಲ್ಲಿ ಕೃಷಿ ಮಾರಾಟ ನೀತಿಯನ್ನು ಜಾರಿಗೊಳಿಸಲಾಗಿದ್ದು, ದೇಶಕ್ಕೆ ಮಾದರಿಯಾಗಿದೆ. ವಿವಿಧ ನಿಯಂತ್ರಿತ ಮಾರುಕಟ್ಟೆಗಳು ಹಾಗೂ ಗೋದಾಮುಗಳ ಜೋಡಣೆ ಮಾಡುವುದರ ಮೂಲಕ ಮಾರುಕಟ್ಟೆಗಳ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವ ಸಾಮರ್ಥ್ಯ ಹೆಚ್ಚಿಸಲು ಗ್ರಾಮೀಣ ಹಂತದಲ್ಲಿ ಉತ್ಪನ್ನಗಳನ್ನು ಒಟ್ಟುಗೂಡಿಸಿ ರೈತರ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಸಚಿವರಾದ ಕೃಷ್ಣ ಭೈರೇಗೌಡ ಹೇಳಿದರು. ನಬಾರ್ಡ್‌ನ ಮುಖ್ಯಸ್ಥರಾದ ಹರ್ಷಕುಮಾರ್ ಬಾನುವಾಲ, ನಬಾರ್ಡ್‌ನ ಡೆಪ್ಯೊಟಿ ಮ್ಯಾನೇಜಿಂಗ್ ಡೈರೆಕ್ಟರ್‌ಗಳಾದ ಎಚ್.ಆರ್. ದವೆ, ಮತ್ತು ಅಮಲೂರು ಪವನ್‌ನಾತನ್ ಕಾರ್ಯಾಗಾರದಲ್ಲಿ ಹಲವಾರು ಸಲಹೆ ನೀಡಿದರು. ವಿವಿಧ ರಾಜ್ಯಗಳಿಂದ ಆಗಮಿಸಿದ ನಬಾರ್ಡ್‌ನ ಪ್ರಾದೇಶಿಕ ಮುಖ್ಯ ಪ್ರಬಂಧಕರು ಹಾಗೂ ನಬಾರ್ಡ್‌ನ ಆಡಳಿತ ಕಚೇರಿಯ ಮುಖ್ಯಸ್ಥರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News