×
Ad

ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಶಿವಮೊಗ್ಗ ಪಾಲಿಕೆ ಆಡಳಿತ ಕಚೇರಿ

Update: 2016-04-29 21:54 IST

ಶಿವಮೊಗ್ಗ,ಎ.29: ದೀಪದ ಬುಡದಲ್ಲಿ ಕತ್ತಲು ಎಂಬ ಮಾತು ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತಕ್ಕೆ ಸೂಕ್ತವಾಗಿ ಅನ್ವಯಿಸುತ್ತದೆ. ನಗರದ ನಾಗರಿಕರಿಗೆ ಕುಡಿಯುವ ನೀರು ಪೂರೈಕೆಯ ಮಹತ್ತರ ಜವಾಬ್ದಾರಿ ಹೊಂದಿರುವ, ಸ್ವಚ್ಛತೆಯಂತಹ ಮಹತ್ವದ ಕಾರ್ಯ ನಿರ್ವಹಣೆ ಮಾಡುತ್ತಿರುವ ಮಹಾನಗರ ಪಾಲಿಕೆ ಆಡಳಿತ ಕಚೇರಿ ಆವರಣದಲ್ಲಿಯೇ ಜೀವ ಜಲಕ್ಕೆ ತೀವ್ರ ಹಾಹಾಕಾರ ಉಂಟಾಗಿದೆ. ಸಾರ್ವಜನಿಕ ಶೌಚಾಲಯವು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.

ಕೆಲ ದಿನಗಳಿಂದ ಪಾಲಿಕೆ ಆವರಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ವಿವಿಧ ಕೆಲಸ ಕಾರ್ಯಗಳ ನಿಮಿತ್ತ ದಿನನಿತ್ಯ ಕಚೇರಿಗೆ ಆಗಮಿಸುವ ನೂರಾರು ನಾಗರಿಕರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಮತ್ತೊಂದೆಡೆ ಆಯುಕ್ತರ ಕೊಠಡಿಯಿಂದ ಕೂದಲೆಳೆ ದೂರದಲ್ಲಿರುವ ಸಾರ್ವಜನಿಕ ಶೌಚಾಲಯವು ಅವ್ಯವಸ್ಥೆಯ ಆಗರವಾಗಿದ್ದು, ದುರ್ನಾತ ಬೀರುತ್ತಿದೆ.

ನೀರಿಲ್ಲ: ಪ್ರಸ್ತುತ ನಗರದಲ್ಲಿ ಬೀಳುತ್ತಿರುವ ಸುಡು ಬಿಸಿಲು ಅಕ್ಷರಶಃ ನಾಗರಿಕರನ್ನು ಹೈರಾಣು ಮಾಡಿದೆ. ಕುಡಿಯುವ ನೀರಿಗೆ ಸಾಕಷ್ಟು ಬೇಡಿಕೆಯಿದೆ. ಆದರೆ ಪಾಲಿಕೆ ಆವರಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ ಘಟಕದಲ್ಲಿ ಕಳೆದ ಸರಿಸುಮಾರು ಮೂರು ದಿನಗಳಿಂದ ನೀರು ಬರುತ್ತಿಲ್ಲ. ಈ ಘಟಕದ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಎಸಿ ಕಚೇರಿಯಲ್ಲಿ ಕುಳಿತು ಬಿಸ್ಲೇರಿ ಬಾಟಲಿ ನೀರು ಕುಡಿಯುವ ಹಿರಿಯ ಅಧಿಕಾರಿಗಳಿಗೆ ಕಚೇರಿಗೆ ಆಗಮಿಸುವ ನಾಗರಿಕರು ನೀರಿನ ದಾಹದಿಂದ ಯಾವ ರೀತಿ ಪರಿತಪಿಸುತ್ತಿದ್ದಾರೆ ಎಂಬುವುದರ ಅರಿವು ಇಲ್ಲವಾಗಿದೆ. ಕುಡಿಯುವ ನೀರಿನ ಘಟಕದಲ್ಲಿ ನೀರು ಲಭ್ಯವಾಗುತ್ತಿಲ್ಲ. ನಾನಾ ಕಾರ್ಯಗಳ ನಿಮಿತ್ತ ಪಾಲಿಕೆ ಕಚೇರಿಗೆ ಆಗಮಿಸುವ ನೂರಾರು ನಾಗರಿಕರು ಕುಡಿಯುವ ನೀರಿಗಾಗಿ ಇಡೀ ಕಚೇರಿ ಸುತ್ತುವಂತಹ ದುಃಸ್ಥಿತಿಯಿದೆ. ಬಾಗಿಲಿಲ್ಲ:  

ಈ ಹಿಂದೆ ಪಾಲಿಕೆ ಕಚೇರಿ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆಯಿಲ್ಲದ ಕಾರಣದಿಂದ ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಲಾಗುತ್ತಿತ್ತು. ಇದರಿಂದ ಪಾಲಿಕೆ ಆವರಣ ಕೊಳೆತು ನಾರುತ್ತಿತ್ತು. ಎ.ಆರ್.ರವಿಯವರು ಪಾಲಿಕೆ ಆಯುಕ್ತರಾಗಿದ್ದ ವೇಳೆ ಲಕ್ಷಾಂತರ ರೂ. ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿತ್ತು. ಪ್ರಸ್ತುತ ಅಸಮರ್ಪಕ ನಿರ್ವಹಣೆಯಿಂದ ಶೌಚಾಲಯವು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಶೌಚಾಲಯದ ಕೊಠಡಿಯೊಂದಕ್ಕೆ ಬಾಗಿಲೇ ಇಲ್ಲವಾಗಿದೆ.

   ಮೂತ್ರ ವಿಸರ್ಜನೆಯ ಪೈಪ್‌ಗಳು ಕಿತ್ತು ಹೋಗಿ ದುರ್ನಾತ ಬೀರುತ್ತಿದೆ. ಕಳೆದ ಹಲವು ದಿನಗಳಿಂದ ಇದೇ ಅವ್ಯವಸ್ಥೆ ಮನೆ ಮಾಡಿದ್ದರೂ ಇಲ್ಲಿಯವರೆಗೂ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ನಾಗರಿಕರು ದೂರುತ್ತಾರೆ. ಇನ್ನೂ ನಗರದ ಇತರೆಡೆಯಿರುವ ಸಾರ್ವಜನಿಕ ಶೌಚಾಲಯಗಳನ್ನು ಇನ್ಯಾವ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಮೇಯರ್ ಮರಿಯಪ್ಪಅವರು ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೊದಲು ಅವರು ಪಾಲಿಕೆಯ ಆವರಣಕ್ಕೆ ಭೇಟಿ ನೀಡಿ ಅಲ್ಲಿರುವ ಮೂಲಸೌಲಭ್ಯಗಳ ಕೊರತೆಯ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಗೋಪಾಳದ ನಿವಾಸಿ ಮಂಜುನಾಥ್ ಎಂಬವರು ಆಗ್ರಹಿಸುತ್ತಾರೆ. ಒಟ್ಟಾರೆ ಇನ್ನಾದರೂ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ತನ್ನ ಆವರಣದಲ್ಲಿ ನಾಗರಿಕರಿಗೆ ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ವಲಯದಲ್ಲಿ ನಗೆಪಾಟಲಿಗೀಡಾಗುವುದರ ಜೊತೆಗೆ ಆಕ್ರೋಶಕ್ಕೂ ತುತ್ತಾಗಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಪಾಲಿಕೆ ಆವರಣದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇನೆ. ಇನ್ನೂ ಮುಂದಾದರೂ ಈ ರೀತಿಯ ಸಮಸ್ಯೆಗಳಿಗೆ ಆಸ್ಪದವಾಗದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜನಪರವಾಗಿ ಕಾರ್ಯನಿರ್ವಹಣೆ ಮಾಡಬೇಕು.

                        

    -ಅಬ್ದುಲ್ ರೆಹ್ಮಾನ್, ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News