ವಿದ್ಯುತ್ ಗುತ್ತಿಗೆದಾರರ ಪಿತೂರಿ ವಿರುದ್ಧ ದಸಂಸ ಧರಣಿ
ಕಡೂರು, ಎ.29: ಪಟ್ಟಣದ ಮೆಸ್ಕಾಂ ಉಪ ವಿಭಾಗದಲ್ಲಿ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ರೋಮರಾಜ್ ವಿರುದ್ಧ ವಿದ್ಯುತ್ ಗುತ್ತಿಗೆದಾರರು ವರ್ಗಾವಣೆಯ ಪಿತೂರಿ ನಡೆಸುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶೂದ್ರ ಶ್ರೀನಿವಾಸ್ ಆರೋಪಿಸಿದ್ದಾರೆ.
ಅವರು ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯುತ್ ಗುತ್ತಿಗೆದಾರರ ವಿರುದ್ಧ ಧರಣಿಯಲ್ಲಿ ಮಾತನಾಡಿದರು. ಮೆಸ್ಕಾಂ ಕಾರ್ಯಪಾಲಕ ಅಭಿಯಂತರರು ಕಳೆದ ಒಂದೂವರೆ ವರ್ಷದಿಂದ ಸಾರ್ವಜನಿಕ ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರು, ದಲಿತರು ಮತ್ತು ಬಡವರಿಗೆ ಸ್ಪಂದಿಸಿ ಯಾವುದೇ ಭ್ರಷ್ಟಾಚಾರವಿಲ್ಲದೆ ತಮ್ಮ ಇತಿಮಿತಿಯೊಳಗಿನ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಹಿನ್ನೆಲೆಯಲ್ಲಿ ದಕ್ಷ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯನ್ನು ದಲಿತರೆಂಬ ಕಾರಣದಿಂದ, ಜನಮುಖಿ ಕೆಲಸಗಳನ್ನು ಸಹಿಸದ ಕೆಲ ವಿದ್ಯುತ್ ಗುತ್ತಿಗೆದಾರರು ಇವರ ಮೇಲೆ ಪಿತೂರಿ ನಡೆಸಿ ವರ್ಗಾವಣೆಗೆ ಪ್ರಯತ್ನ ನಡೆಸುತ್ತಿರುವುದಲ್ಲದೆ, ಮಾನಸಿಕ ಕಿರುಕುಳ ನೀಡುತ್ತಿರುವ ಕೆಲ ವಿದ್ಯುತ್ ಗುತ್ತಿಗೆದಾರರ ಮೇಲೆ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.
ಉತ್ತಮ ಸ್ಪಂದನೆಯುಳ್ಳ ಮೆಸ್ಕಾಂ ಅಧಿಕಾರಿಯನ್ನು ವರ್ಗಾವಣೆ ಮಾಡದೆ, ತಾಲೂಕಿನಲ್ಲಿಯೇ ಮುಂದುವರಿಸಬೇಕಾಗಿದೆ. ಕಳಪೆ ಕಾಮಗಾರಿ ನಡೆಸಿದ ಮೆಸ್ಕಾಂ ಗುತ್ತಿಗೆದಾರರ ಕಾಮಗಾರಿಯನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರಗಿಸಿ ಕಪ್ಪುಪಟ್ಟಿಗೆ ಸೇರಿಸಬೇಕಿದೆ. ಅಧಿಕಾರಿಗಳ ಮೇಲೆ ನಡೆಸುತ್ತಿರುವ ಮಾನಸಿಕ ಕಿರುಕುಳವನ್ನು ಕೆಲ ವಿದ್ಯುತ್ ಗುತ್ತಿಗೆದಾರರು ಮುಂದುವರಿಸಿದಲ್ಲಿ ದಲಿತಪರ ಸಂಘಟನೆಗಳೊಂದಿಗೆ ಉಗ್ರ ಹೋರಾಟದ ಮೂಲಕ ಪತ್ರಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ತಾಲೂಕು ದಂಡಾಧಿಕಾರಿ ಎಂ. ಭಾಗ್ಯಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದಭರ್ದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಜಗದೀಶ್, ಚನ್ನವೀರಪ್ಪ, ಲಕ್ಷ್ಮಣ್, ಹೊಗರೆಹಳ್ಳಿ ರಾಮಸ್ವಾಮಿ, ಮಂಜಪ್ಪ, ಕೃಷ್ಣಪ್ಪ, ಹೇಮಂತ್, ಮೈಲಾರಪ್ಪ ಉಪಸ್ಥಿತರಿದ್ದರು.