ಗ್ರಾಪಂಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ತಾಣವಾಗಲಿ: ಎಚ್.ಕೆ.ನವೀನ್
ಮೂಡಿಗೆರೆ, ಎ.29: ಗ್ರಾಪಂಗಳು ತಿಳುವಳಿಕೆ ಇಲ್ಲದ ಜನರಿಗೆ ಕಾನೂನು ಅರಿವು ಮೂಡಿಸುವ ಜತೆಗೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ತಾಣಗಳಾಗಬೇಕು ಎಂದು ಮೂಡಿಗೆರೆ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಕೆ.ನವೀನ್ ತಿಳಿಸಿದ್ದಾರೆ.
ಅವರು ತಾಲೂಕು ಕಾನೂನು ಸೇವಾ ಸಮಿತಿ, ತಾಪಂ ಮತ್ತು ವಕೀಲರ ಸಂಘದ ವತಿಯಿಂದ ಡಿಎಸ್‌ಬಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳಿಗೆ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರದಲ್ಲಿ ಮಾತನಾಡಿದರು. ಜನನ ಮರಣ ನೋಂದಣಿ, ಖಾತೆ ಬದಲಾವಣೆ, ಸರಕಾರದ ವಿವಿಧ ಸೌಲಭ್ಯ ಹಾಗೂ ಇತರೆ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಕಾನೂನು ಸೇವಾ ಸಮಿತಿ ನ್ಯಾಯಾಲಯ ಕಟ್ಟಡದಲ್ಲಿ ಹಾಗೂ ಸಿಡಿಪಿಒ ಕಚೇರಿ, ಕಳಸದ ಪಶುವೈದ್ಯ ಕಚೇರಿಯಲ್ಲಿ ವಕೀಲರನ್ನೊಬ್ಬರನ್ನು ನೇಮಿಸಲಾಗಿದ್ದು, ಇಲ್ಲಿ ಅಹವಾಲು ಸಲ್ಲಿಸಿ ಉಚಿತ ಕಾನೂನು ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದರು.
3,412 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಬಗೆಹರಿಸಲಾಗಿದೆ. ಇದಕ್ಕೆ ಸರಕಾರ 1,95,928 ರೂ. ಖರ್ಚು ಭರಿಸಿದೆ. ಇದರಿಂದಾಗಿ ಸಾರ್ವಜನಿಕರಿಗೆ 65,18,000 ರೂ. ತೆರಿಗೆ ಉಳಿತಾಯವಾದಂತಾಗಿದೆ. ಖಾಸಗಿ ಕಟ್ಟಡ ನಿರ್ಮಾಣ ವೇಳೆ ನಿರ್ಮಾಣ ವೆಚ್ಚದ ಶೇ.1ರಷ್ಟನ್ನು ಪಿಡಿಒಗಳು ವಸೂಲಿ ಮಾಡಿ ಕಾರ್ಮಿಕ ಇಲಾಖೆಗೆ ಕಾನೂನು ಪ್ರಕಾರ ಜಮಾ ಮಾಡಬೇಕಾಗಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಕೀಲರಾದ ಎಂ.ವಿ.ಜಯರಾಜ್, ಚೇತನ್, ಎನ್.ಎಸ್.ಜಯರಾಮ್, ಹಾಗೂ ಸಂಪನ್ಮೂಲ ವ್ಯಕ್ತಿ ಮೈಸೂರಿನ ವೆಂಕಟೇಶ್ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಕಿರಿಯ ನ್ಯಾಯಾಧೀಶ ಅರವಿಂದ್, ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್, ತಹಶೀಲ್ದಾರ್ ಪಧ್ಮನಾಭಶಾಸ್ತ್ರಿ, ಇಒ ರುದ್ರಪ್ಪ, ಸರಕಾರಿ ಅಭಿಯೋಜಕ ಸುನೀಲ್ ಪಾಟೀಲ್, ಉಪನ್ಯಾಸಕ ಪ್ರೊ. ಬಸವರಾಜ್ ಹಾಗೂ ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.