×
Ad

ಸರಕಾರದಿಂದ ಹೆನುಗಾರಿಕೆಗೆ ಹೆಚ್ಚಿನ ಸೌಲಭ್ಯ: ಕಾಗೋಡು ತಿಮ್ಮಪ್ಪ

Update: 2016-04-29 22:09 IST

ಸಾಗರ, ಎ. 29: ರಾಜ್ಯ ಸರಕಾರ ಹೈನುಗಾರಿಕೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಹೈನುಗಾರಿಕೆಗೆ ಪೂರಕವಾದ ವಾತಾವರಣವಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಇಲ್ಲಿನ ಪಶು ವೈದ್ಯಕೀಯ ಇಲಾಖೆಯ ವತಿ ಯಿಂದ 12 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ಆಸ್ಪತ್ರೆಯನ್ನು ಶುಕ್ರವಾರ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಾ, ಕೃಷಿಯೊಂದಿಗೆ ಉಪ ಕಸುಬಾಗಿ ಹೈನುಗಾರಿಕೆ ಕೈಗೊಂಡರೆ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದರು. ಪಶುಭಾಗ್ಯ ಯೋಜನೆಯಡಿ ಹಸುಗಳ ಖರೀದಿಗೆ 1.20 ಲಕ್ಷ ರೂ. ಅನುದಾನ ನೀಡುತ್ತಿದ್ದು, ಸರಕಾರ ಶೇ. 50ರಷ್ಟು ಸಬ್ಸಿಡಿ ಕೊಡುತ್ತದೆ. ಜೊತೆಗೆ ಕುರಿ ಮತ್ತು ಮೇಕೆ ಸಾಕಣೆಗೆ ಸಬ್ಸಿಡಿ  ದರದಲ್ಲಿ ಸಹಾಯಧನವನ್ನು ನೀಡಲಾಗುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತಾಲೂಕಿನ 15 ಜನರಿಗೆ ಮೇವು ಕಟಾವ್ ಮಾಡುವ ಯಂತ್ರವನ್ನು ನೀಡಲಾಗಿದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಅಧಿಕಾರಿಗಳು ಕಾಲಕಾಲಕ್ಕೆ ಸರಕಾರದಿಂದ ಹೈನುಗಾರಿಕೆ ಅಭಿವೃದ್ಧಿಗೆ ಜಾರಿಯಾಗುವ ಯೋಜನೆ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದರು. ತಾಲೂಕಿನ ಹೆಗೊ್ಗೀಡು ಮತ್ತು ಮಾಸೂರುನಲ್ಲಿ ನೂತನ ಪಶು ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ತ್ಯಾಗರ್ತಿಯಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆ ಕಟ್ಟಡ ಅಂತಿಮ ಹಂತದಲ್ಲಿದೆ. ಮಿಶ್ರತಳಿ ಜಾನುವಾರುಗಳಿಗೆ ವಿಮಾ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಯಲ್ಲಿದೆ. ಯಾರು ಕೆ.ಎಂ.ಎಫ್.ನಲ್ಲಿ ನೋಂದಾಯಿಸಿಕೊಂಡಿರುತ್ತಾರೋ ಅಂತಹವರ ಜಾನುವಾರುಗಳಿಗೆ ವಿಮಾ ಸೌಲಭ್ಯ ಕೊಡಲಾಗುತ್ತದೆ. ಕೆ.ಎಂ.ಎಫ್.ನಲ್ಲಿ ಸದಸ್ಯರಾಗದೆ ಇದ್ದವರಿಗೂ ಯೋಜನೆಯಡಿ ಸೌಲಭ್ಯ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಆರ್.ಸಿ.ಮಂಜುನಾಥ್, ತಾಪಂ ಸದಸ್ಯ ಕಲಸೆ ಚಂದ್ರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಾಥ್, ಸದಸ್ಯ ಅರವಿಂದ ಸಿ. ರಾಯ್ಕರ್, ಶಿವಮೊಗ್ಗ ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಸಿ. ಭಾಸ್ಕರ ನಾಯ್ಕಾ, ಸಹಾಯಕ ನಿರ್ದೇಶಕ ಡಾ. ಟಿ.ಎಂ.ಸದಾಶಿವ, ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾವಿತ್ರಮ್ಮ ಪ್ರಾರ್ಥಿಸಿ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎಸ್.ಕಲ್ಲಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ಎನ್.ಎಚ್.ಶ್ರೀಪಾದರಾವ್ ವಂದಿಸಿದರು. ಡಾ. ಎಚ್.ವಿ.ದಯಾನಂದ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News