2.40 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗದ 8 ಕನ್ಸರ್‌ವೆನ್ಸಿಗಳ ಅಭಿವೃದ್ಧಿ: ಐಡಿಯಲ್ ಗೋಪಿ
ಶಿವಮೊಗ್ಗ, ಎ. 29: ನಗರದ ಪ್ರಮುಖ ರಸ್ತೆಗಳಲ್ಲಿ ಅವ್ಯವಸ್ಥೆಯ ಆಗರವಾಗಿ, ಅಸ್ವಚ್ಛತೆಯ ತಾಣವಾಗಿ ಪರಿಣಮಿಸಿರುವ ಕನ್ಸರ್‌ವೆನ್ಸಿಗಳನ್ನು ಮೇಲ್ದರ್ಜೆಗೇರಿಸಿ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡುವ ಪ್ರಕ್ರಿಯೆಗೆ ಮಹಾನಗರ ಪಾಲಿಕೆ ಆಡಳಿತ ಮತ್ತೆ ಚಾಲನೆ ನೀಡಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ಕನ್ಸರ್‌ವೆನ್ಸಿಗಳ ಅಭಿವೃದ್ಧಿ ಕಾರ್ಯವನ್ನು ಆರಂಭಿಸಿದೆ. 20ನೆ ವಾರ್ಡ್ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯ ಅನುದಾನದಲ್ಲಿ, ಸುಮಾರು 2.40 ಕೋಟಿ ರೂ. ವೆಚ್ಚದಲ್ಲಿ 8 ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಆ ವಾರ್ಡ್‌ನ ಕಾರ್ಪೊರೇಟರ್ ಆದ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಐಡಿಯಲ್ ಗೋಪಿ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 8 ಕನ್ಸರ್‌ವೆನ್ಸಿಗಳಲ್ಲಿ ಕೆಲವೆಡೆ ಕಿರು ಸಂತೆಗೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಉಳಿದೆಡೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರಮುಖ ಕನ್ಸರ್‌ವೆನ್ಸಿಗಳಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸಹಕಾರಿ: ತಮ್ಮ ವಾರ್ಡ್ ವ್ಯಾಪ್ತಿಯ ದುರ್ಗಿಗುಡಿ, ಪಾರ್ಕ್ ಬಡಾವಣೆ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಕನ್ಸರ್‌ವೆನ್ಸಿಗಳು ಗಿಡಗಂಟೆ ಬೆಳೆದುಕೊಂಡು ಅವ್ಯವಸ್ಥೆಯ ಆಗರವಾಗಿದಮ. ಹಲವೆಡೆ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡು ತ್ತಿದ್ದರು. ಘನತ್ಯಾಜ್ಯ ವಸ್ತುಗಳನ್ನು ಹಾಕಲಾಗುತ್ತಿತ್ತು. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ತೀವ್ರ ಕಿರಿಕಿರಿ ಎದುರಿಸುವಂತಾಗಿತ್ತು. ಮತ್ತೊಂದೆಡೆ ಈ ರಸ್ತೆಗಳಲ್ಲಿ ಜನ-ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಯಿಲ್ಲದೆ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ಟ್ರಾಫಿಕ್ ಕಿರಿಕಿರಿ ತೀವ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಿ ವಾಹನಗಳ ನಿಲುಗಡೆ ಹಾಗೂ ಇತರ ಉದ್ದೇಶಗಳಿಗೆ ಬಳಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ 8 ಕನ್ಸರ್‌ವೆನ್ಸಿಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 2.40 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕಾಲಮಿತಿಯೊಳಗೆ ಕನ್ಸರ್‌ವೆನ್ಸಿಗಳ ಅಭಿವೃದ್ಧಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪಾರ್ಕ್ ಬಡಾವಣೆಯ ವಾತ್ಸಲ್ಯ ಆಸ್ಪತ್ರೆ ಸಮೀಪದ ಕನ್ಸರ್‌ವೆನ್ಸಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗುವುದು. ಇದಕ್ಕೆ ಹೊಂದಿಕೊಂಡಂತೆ ಇರುವ ಆಟೊ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಗೋಪಿ ಮಾಹಿತಿ ನೀಡಿದ್ದಾರೆ. ಪೊನ್ನುರಾಜ್ ಕಲ್ಪನೆ: ಈ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ವಿ. ಪೊನ್ನು ರಾಜ್ ನಗರದ ಪ್ರಮುಖ ರಸ್ತೆಗಳಲ್ಲಿರುವ ಕನ್ಸರ್‌ವೆನ್ಸಿ
ಗಳನ್ನು ಮೇಲ್ದರ್ಜೆಗೇರಿಸಿ ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವ ಮಹತ್ತರ ಯೋಜನೆ ರೂಪಿಸಿದ್ದರು. ಅದರಂತೆ ಪ್ರಾಯೋಗಿಕವಾಗಿ ಎರಡು ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿ ಪಡಿಸಿದ್ದರು. ಫುಟ್‌ಪಾತ್ ತಿಂಡಿ-ತಿನಿಸು ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಆದರೆ ಅವರು ವರ್ಗಾವಣೆಗೊಂಡ ನಂತರ ಕನ್ಸರ್‌ವೆನ್ಸಿ ಅಭಿವೃದ್ಧಿ ಯೋಜನೆ ಹಳ್ಳ ಹಿಡಿದಿತ್ತು. ಇದೀಗ ಪಾಲಿಕೆ ಆಡಳಿತ ಮತ್ತೆ ಈ ಯೋಜನೆಗೆ ಚಾಲನೆ ನೀಡಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.