ರಾಜ್ಯೋತ್ಸವಕ್ಕೆ ನಮ್ಮ ಮೆಟ್ರೊ ಮೊದಲ ಹಂತ ಪೂರ್ಣ: ಸಿಎಂ
ಬೆಂಗಳೂರು, ಎ.29: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ (ನ.1ರಂದು)ದಂದು ನಮ್ಮ ಮೆಟ್ರೊ ರೈಲು ಸಂಪರ್ಕದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಮುಂಭಾಗದಲ್ಲಿ ಕಬ್ಬನ್ ಪಾರ್ಕ್‌ನಿಂದ ಸಿಟಿ ರೈಲ್ವೆ ನಿಲ್ದಾಣದವರೆಗಿನ ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾದ 4.8 ಕಿ.ಮೀ ಉದ್ದದ ಸುರಂಗ ಮೆಟ್ರೊ ಮಾರ್ಗವನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಅವರೊಂದಿಗೆ ಉದ್ಘಾಟಿಸಿ ಮುಖ್ಯಮಂತ್ರಿ ಮಾತನಾಡಿದರು.
ನಮ್ಮ ಮೆಟ್ರೊ ಸುರಂಗ ಮಾರ್ಗವು ಕಬ್ಬನ್‌ಪಾರ್ಕ್, ಡಾ.ಬಿ.ಆರ್.ಅಂಬೇಡ್ಕರ್ ನಿಲ್ದಾಣ(ವಿಧಾನಸೌಧ), ಸರ್ ಎಂ.ವಿಶ್ವೇಶ್ವರಯ್ಯ(ಸೆಂಟ್ರಲ್‌ಕಾಲೇಜು), ಕೆಂಪೇಗೌಡ ನಿಲ್ದಾಣ(ಮೆಜೆಸ್ಟಿಕ್) ಹಾಗೂ ಸಿಟಿ ರೈಲು ನಿಲ್ದಾಣವನ್ನು ಹೊಂದಿದ್ದು, ಸಾರ್ವಜನಿಕರ ಸೇವೆಗೆ ಮುಕ್ತವಾಗಿದೆ ಎಂದು ಅವರು ಹೇಳಿದರು.
ನಮ್ಮ ಮೆಟ್ರೊ ಕಾಮಗಾರಿಯು 2007ರಲ್ಲಿ ಆರಂಭಗೊಂಡಿತು. ಮೊದಲನೆ ಹಂತದ ಕಾಮಗಾರಿಯು ಶೇ.90ರಷ್ಟು ಮುಗಿದಿದೆ. ಸುರಂಗ ಮಾರ್ಗದ ಕಾಮಗಾರಿ ವೇಳೆ ಬಂಡೆ ಸಿಕ್ಕಿದ್ದರಿಂದ ಸ್ವಲ್ಪ ವಿಳಂಬವಾಗಿದೆ. ಈಗಾಗಲೇ 33 ಕಿ.ಮೀ ಉದ್ದದ ಮಾರ್ಗ ಪೂರ್ಣಗೊಂಡಿದ್ದು, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದಂದು 42.3 ಕಿ.ಮೀ ಉದ್ದದ ಸಂಪೂರ್ಣ ಕೆಲಸ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮೊದಲನೆ ಹಂತದ ಕಾಮಗಾರಿಗೆ 13,845 ಕೋಟಿ ರೂ.ವೆಚ್ಚವಾಗುತ್ತಿದ್ದು, ರಾಜ್ಯ ಸರಕಾರದ ಪಾಲು 5,335 ಕೋಟಿ ರೂ.ಒದಗಿಸಲಾಗಿದೆ. ಇದಕ್ಕೆ ಜೈಕಾ ಸಂಸ್ಥೆ ಹಾಗೂ ಕೇಂದ್ರ ಸರಕಾರ ಆರ್ಥಿಕ ನೆರವು ನೀಡಿದೆ. ಎರಡನೆ ಹಂತದ 72 ಕಿ.ಮೀ ಉದ್ದದ ಮಾರ್ಗಕ್ಕೆ 26,405 ಕೋಟಿ ರೂ.ಅಗತ್ಯವಿದ್ದು, ಈ ಪೈಕಿ ರಾಜ್ಯ ಸರಕಾರದ ಪಾಲು 9 ಸಾವಿರ ಕೋಟಿ ರೂ.ಗಳು ಎಂದು ಅವರು ಹೇಳಿದರು.
ಎರಡನೆ ಹಂತದ ಕಾಮಗಾರಿಗೆ ಈಗಾಗಲೆ 900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಆರಂಭವಾಗಿದೆ. ಉಳಿದ 8100 ಕೋಟಿ ರೂ.ಗಳನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು. ಈಗಾಗಲೇ ಭೂಸ್ವಾಧೀನ ಹಾಗೂ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
2020ರ ವೇಳೆಗೆ ಎರಡನೆ ಹಂತದ ಕಾಮಗಾರಿಯೂ ಮುಕ್ತಾಯವಾಗುವ ನಿರೀಕ್ಷೆಯಿದೆ. ಎರಡನೆ ಹಂತದ ಕಾಮಗಾರಿ ಪೂರ್ಣಗೊಂಡರೆ ಒಟ್ಟು 111 ಕಿ.ಮೀ ಉದ್ದದ ರೈಲ್ವೆ ಮಾರ್ಗವಾಗುತ್ತದೆ. ಮೂರನೆ ಹಂತದ ಕಾಮಗಾರಿಗೂ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು, ಸಮೀಕ್ಷೆ ನಡೆಸಿ ವರದಿ ನೀಡುವಂತೆ ರೈಟ್ಸ್ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮೂರನೆ ಹಂತದ ಮಾರ್ಗವು ಒಟ್ಟು 151 ಕಿ.ಮೀ ವಿಸ್ತೀರ್ಣ ಹೊಂದಿದ್ದು, ವಿಮಾನ ನಿಲ್ದಾಣದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವು ಇದರಲ್ಲಿ ಸೇರಿದೆ. ವೆಂಕಯ್ಯನಾಯ್ಡು ಕೇಂದ್ರ ಸರಕಾರದಿಂದ ಎಲ್ಲ ನೆರವು ನೀಡುವುದಾಗಿ ಹೇಳಿದ್ದಾರೆ. ಸಕಾಲದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ನೆರವು ಸಿಗುವ ವಿಶ್ವಾಸವಿದೆ ಈ ಹಿನ್ನೆಲೆಯಲ್ಲಿ ಮುಂಚಿತವಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಮೆಟ್ರೊ ರೈಲು ಮಾರ್ಗದಿಂದ ಬೆಂಗಳೂರು ನಗರದಲ್ಲಿ ಉತ್ತಮವಾದ ಸಾರಿಗೆ ವ್ಯವಸ್ಥೆ ಒದಗಿಸಬೇಕೆಂಬ ಸರಕಾರದ ಉದ್ದೇಶ ಈಡೇರಲಿದೆ. ಮೂರನೆ ಹಂತದ ಕಾಮಗಾರಿಯೂ ಪೂರ್ಣಗೊಂಡರೆ ಬೆಂಗಳೂರಿನ 20 ಲಕ್ಷ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆ ಒದಗಿಸಿದಂತಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ನಗರದಲ್ಲಿ ಜನಸಂಖ್ಯೆ ಒಂದು ಕೋಟಿ ದಾಟಿದೆ. ನಗರದ ವಿಸ್ತೀರ್ಣ 800 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. 55 ಲಕ್ಷ ವಾಹನಗಳಿವೆ. ಜನಸಂದಣಿ ಹೆಚ್ಚಾಗಿದೆ. ಇಷ್ಟೊಂದು ಬೃಹತ್ ಬೆಳೆದಿರುವ ನಗರಕ್ಕೆ ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ಉತ್ತಮವಾದ ವಾತಾವರಣ, ಶುದ್ಧ ಗಾಳಿ, ಬೆಳಕು ನೀಡಬೇಕಾದ್ದು ಸರಕಾರ ಹಾಗೂ ಬಿಬಿಎಂಪಿ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಮಾತನಾಡಿ, ದೇಶದ ಹೆಮ್ಮೆಯಾಗಿರುವ ಬೆಂಗಳೂರು ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ರಾಜ್ಯ ಸರಕಾರ ನೀಡುವ ಎಲ್ಲ ಪ್ರಸ್ತಾವನೆಗಳನ್ನು ಆದ್ಯತೆ ಮೇರೆಗೆ ಅನುಮೋದನೆ ನೀಡಲಾಗುವುದು ಎಂದರು.
ಬೆಂಗಳೂರಿಗೆ ಮೆಟ್ರೊ ರೈಲ್ವೆ ವ್ಯವಸ್ಥೆ ಕಲ್ಪಿಸಬೇಕೆಂದು 2002ರಲ್ಲಿ ಕೇಂದ್ರದಲ್ಲಿ ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ ನೀಲಿನಕ್ಷೆ ತಯಾರಿಸಲಾಯಿತು. ಬೆಂಗಳೂರು ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರಗಳಿಗೂ ಮೆಟ್ರೊ ರೈಲ್ವೆ ಸೇವೆಯನ್ನು ವಿಸ್ತರಿಸಲು ಈಗಿನ ಕೇಂದ್ರ ಸರಕಾರ ಮುಂದಾಗಿದೆ ಎಂದು ಅವರು ಹೇಳಿದರು.