ಶಾಸಕರು-ಮೇಲ್ಮನೆ ಸದಸ್ಯರ ಮಧ್ಯೆ ಜಟಾಪಟಿ
ಮೇಲ್ಮನೆ ಸದಸ್ಯರಿಗೆ 10 ಲಕ್ಷ ರೂ., ಶಾಸಕರಿಗೆ 40 ಲಕ್ಷ ರೂ.ಅನುದಾನ
ಬೆಂಗಳೂರು, ಎ. 29: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಮಲೆನಾಡಿನ ಅಭಿವೃದ್ಧಿಗೆ ಶಾಸಕರಿಗೆ ತಲಾ 26 ಲಕ್ಷ ರೂ. ಹಾಗೂ ಮೇಲ್ಮನೆ ಸದಸ್ಯರಿಗೆ ತಲಾ 10 ಲಕ್ಷ ರೂ.ಗಳನ್ನು ನೀಡಲು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮಂಡಳಿಯ ಅಧ್ಯಕೆ ಬಿ.ಸಿ.ಗೀತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಲೆನಾಡು ಭಾಗದ ಎಲ್ಲ ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಹಿದ್ದೀನ್ ಬಾವಾ, ಶಿವರಾಮ ಹೆಬ್ಬಾರ, ವೈಎಸ್‌ವಿ ದತ್ತ, ಜೀವರಾಜ್, ಹಾಗೂ ಮೇಲ್ಮನೆ ಸದಸ್ಯರು ಪಾಲ್ಗೊಂಡಿದ್ದರು.
ಮಲೆನಾಡು ಪ್ರದೇಶ ವ್ಯಾಪ್ತಿಯ ಒಟ್ಟು 52 ಮಂದಿ ಶಾಸಕರಿದ್ದು, ತಲಾ 26 ಲಕ್ಷ ರೂ.ಗಳನ್ನು ಮಂಡಳಿಯಿಂದ ಮಲೆನಾಡು ಪ್ರದೇಶದ ಅಭಿವೃದ್ಧಿಗೆ ಒದಗಿಸಲು ತೀರ್ಮಾನಿಸಲಾಗಿದೆ. ಅದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ದೊರೆಯುವ ಅನುದಾನ ಸೇರಿ ತಲಾ 40 ಲಕ್ಷ ರೂ.ಗಳನ್ನು ಅನುದಾನ ಶಾಸಕರಿಗೆ ದೊರೆಯಲಿದೆ.
ಇದೇ ಮೊದಲ ಬಾರಿಗೆ ಮಲೆನಾಡು ಭಾಗದ ಮೇಲ್ಮನೆ ಸದಸ್ಯರಿಗೂ ತಲಾ 10ಲಕ್ಷ ರೂ. ಅನುದಾನ ನೀಡಲು ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶಾಸಕರು ಹಾಗೂ ಮೇಲ್ಮನೆ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಾರ್ಗಸೂಚಿಯನ್ವಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಕಳೆದ ಸಾಲಿನಲ್ಲಿ ಶಾಸಕರಿಗೆ ಹೆಚ್ಚಿನ ಅನುದಾನ ನೀಡಲಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಅನುದಾನ ಕಡಿತದ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯರಿಗೆ ಅನುದಾನ ನೀಡುವುದು ಬೇಡ ಎಂದು ಶಾಸಕರು ಒಕ್ಕೂರಲಿನಿಂದ ಒತ್ತಾಯಿಸಿದರು. ಆ ಹಿನ್ನೆಲೆಯಲ್ಲಿ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಈ ವೇಳೆ ಮಾತನಾಡಿದ ಮೇಲ್ಮನೆ ಸದಸ್ಯರು ‘ನಮಗೂ ಹಕ್ಕಿದೆ, ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ ಎಂದು ಶಾಸಕರನ್ನು ಪ್ರಶ್ನಿಸಿದರು. ಆ ಬಳಿಕ ಮಧ್ಯ ಪ್ರವೇಶಿಸಿದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಬಿ.ಸಿ.ಗೀತಾ, ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮೇಲ್ಮನೆ ಸದಸ್ಯರಿಗೂ 10 ಲಕ್ಷ ರೂ. ಅನುದಾನ ನೀಡಲು ಸಮ್ಮತಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಯಾಯಿತು.
ಮೇಲ್ಮನೆ ಸದಸ್ಯರಿಗೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ನೀಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇರಲಿಲ್ಲ. ಆ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ಒಕ್ಕೂರಲಿನಿಂದ ವಿರೋಧ ವ್ಯಕ್ತಪಡಿಸಿದೆವು. ಇದೀಗ ಮೇಲ್ಮನೆ ಸದಸ್ಯರಿಗೂ 10 ಲಕ್ಷ ರೂ.ಅನುದಾನ ನೀಡಲು ತೀರ್ಮಾನಿಸಿದೆ. ಮಲೆನಾಡು ಪ್ರದೇಶಾಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು.
- ಮೊಯ್ದಿನ್ ಬಾವಾ, ಶಾಸಕ ಮಂಗಳೂರು ನಗರ ಉತ್ತರ ಕ್ಷೇತ್ರ