×
Ad

ಕಾರ್ಮಿಕರ ಕೇಸ್ ಹಿಂಪಡೆಯಲು ಜಂಟಿ ಕಾರ್ಮಿಕ ಸಂಘಟನೆಗಳ ಆಗ್ರಹ

Update: 2016-04-29 23:38 IST

ಬೆಂಗಳೂರು,ಎ.29: ಕೇಂದ್ರ ಸರಕಾರದ ಜಾರಿಗೆ ತಂದ ನೂತನ ಪಿಎಫ್ ನೀತಿಯನ್ನು ವಿರೋಧಿಸಿ ಹೋರಾಟ ಮಾಡಿದ ಕಾರ್ಮಿಕರ ಮೇಲೆ ದಾಖಲಿಸಿರುವ ಜಾಮೀನು ರಹಿತ ಕೇಸ್‌ಗಳನ್ನು 15 ದಿನಗಳೊಳಗೆ ವಾಪಸು ಪಡೆಯಬೇಕೆಂದು ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಅಧ್ಯಕ್ಷ ವಿ.ಜೆ.ಕೆ. ನಾಯರ್, ಕಾರ್ಮಿಕರು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಮಹಿಳೆಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಮಾಯಕ ಕಾರ್ಮಿಕರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಹೋರಾಟದಲ್ಲಿ ಭಾಗವಹಿಸಿದ್ದ ಸುಮಾರು 300 ಕಾರ್ಮಿಕರನ್ನು ಬಂಧಿಸಿದ್ದು, ಇವರ ಮೇಲೆ ಜಾಮೀನು ರಹಿತ ಕೇಸ್‌ಗಳನ್ನು ದಾಖಲಿಸಲಾಗಿದೆ. ಕಾರ್ಮಿಕರ ಮೇಲೆ ಹಾಕಿರುವ ಕೇಸ್‌ಗಳನ್ನು ಸರಕಾರ ಹಿಂಪಡೆಯಲಾಗುತ್ತದೆ ಹಾಗೂ ಕಾರ್ಮಿಕರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸರಕಾರ ಹೇಳಿಕೆಯನ್ನು ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಕೇಸ್‌ಗಳನ್ನು ವಾಪಸು ಪಡೆದಿಲ್ಲ. ಬದಲಿಗೆ ಇದೀಗ ಮತ್ತೆ ಪೊಲೀಸರು ಕಾರ್ಖಾನೆಗಳಿಗೆ ನುಗ್ಗಿ ಮತ್ತೆ ಕಾರ್ಮಿಕರನ್ನು ಬಂಧಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಗಳು ಇಂದು ಬಂಡವಾಳಶಾಹಿಗಳಿಗೆ ಬೆಂಬಲ ನೀಡಲಾಗುತ್ತಿದೆ. ಮತ್ತೊಂದು ಕಡೆ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಅವರ ಮೇಲೆ ದಬ್ಬಾಳಿಕೆಯನ್ನು ಮಾಡಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಪ್ರಜಾಪ್ರಭುತ್ವದಲ್ಲಿ ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.
ಎಐಟಿಯುಸಿ ಅಧ್ಯಕ್ಷ ಅನಂತಸುಬ್ಬರಾವ್ ಮಾತನಾಡಿ, ಕಾರ್ಮಿಕರ ಮೇಲೆ ದಾಖಲಿಸಿರುವ ಕೇಸ್‌ಗಳನ್ನು ಹಿಂಪಡೆಯಲಾಗುತ್ತದೆ ಎಂದು ಹೇಳಿದ ಸರಕಾರ ಮತ್ತೆ ಕಾರ್ಮಿಕರ ಮೇಲೆ ಗದಾಪ್ರಹಾರ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರಕಾರ ಪೊಲೀಸ್ ಇಲಾಖೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ರಾಜ್ಯದಲ್ಲಿ ಮತ್ತೊಮ್ಮೆ ಕಾರ್ಮಿಕರು ಸರಕಾರದ ವಿರುದ್ಧ ಸಿಡಿದೇಳುವ ಮೊದಲೇ, ಮುಂದಿನ 15 ದಿನಗಳೊಳಗೆ ಯಾವುದೇ ನಿರ್ಬಂಧಗಳಿಲ್ಲದೆ ಕೇಸ್‌ಗಳನ್ನು ವಾಪಸು ಪಡೆಯಬೇಕು. ಇಲ್ಲವಾದರೆ ಮೇ.16 ರಿಂದ ಸಾಮೂಹಿಕ ಧರಣಿಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News