ನಮ್ಮ ಹಾಪ್‌ಕಾಮ್ಸ್‌ನಲ್ಲಿ ಚೀನಾದ ಆ್ಯಪಲ್ ಯಾಕೆ?

Update: 2016-04-29 19:02 GMT

ಮಾನ್ಯರೆ,

ಎರಡು ದಿನಗಳ ಹಿಂದೆ ರಾಜ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸಿ, ರಾಜ್ಯದ ಹಾಪ್‌ಕಾಮ್ಸ್ ನಲ್ಲಿ ಚೀನಾದ ಆ್ಯಪಲ್‌ಗಳನ್ನು ಮಾರಲಾಗುವುದು ಎಂದು ಘೋಷಿಸಿದ್ದಾರೆ. ಚೀನಾ ಆ್ಯಪಲ್‌ಗಳ ಉಪಯೋಗಗಳ ಬಗ್ಗೆಯೂ ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ಚೀನಾದ ರೈತರು ಬೆಳೆದ ಆ್ಯಪಲ್‌ಗಳನ್ನು ಮಾರುವುದಕ್ಕಾಗಿ ಕರ್ನಾಟಕದ ಹಾಪ್‌ಕಾಮ್ಸ್‌ಗಳಿವೆಯೇ? ಇದರಿಂದ ಕರ್ನಾಟಕದ ರೈತರಿಗೆ ಏನು ಪ್ರಯೋಜನವಾಗುತ್ತದೆ? ಎನ್ನುವುದನ್ನು ಸಚಿವರು ಹೇಳೇ ಇಲ್ಲ. ಮುಖ್ಯವಾಗಿ ಹಾಪ್‌ಕಾಮ್ಸ್‌ನ ಉದ್ದೇಶವನ್ನೇ ಸಚಿವರು ಅರಿತಂತೆ ಇಲ್ಲ.

ಹಾಪ್‌ಕಾಮ್ಸ್‌ಗಳಿರುವುದು ನಮ್ಮ ನಾಡಿನ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು. ರೈತರು ಬೆಳೆದ ಫಲವಸ್ತುಗಳನ್ನು ಸರಕಾರವೇ ಸಂಗ್ರಹಿಸಿ, ಅದನ್ನು ಜನರ ಬಳಿಗೆ ತಲುಪಿಸುವುದು ಆ ಮೂಲಕ ರೈತರಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡುವುದು ಮತ್ತು ಗ್ರಾಹಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಹಾಪ್‌ಕಾಮ್ಸ್‌ನ ಹೊಣೆಗಾರಿಕೆಯಾಗಿದೆ. ನಮ್ಮ ರಾಜ್ಯ ಮತ್ತು ದೇಶದ ವಿವಿಧ ರೈತರು ಬೆಳೆದ ಹಣ್ಣು ಹಂಪಲು, ತರಕಾರಿಗಳನ್ನು ಜನರಿಗೆ ತಲುಪುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಆದರೆ ನಮ್ಮ ಸರಕಾರ ನಮ್ಮ ರೈತರ ಹಿತಾಸಕ್ತಿ ಬದಿಗಿಟ್ಟು ಚೀನಾ ರೈತರ ಬಗ್ಗೆ ಹೆಚ್ಚು ಆಸಕ್ತಿ ತಳೆದಂತಿದೆ. ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಬೇಕಾಗಿದೆ. ನಮ್ಮ ಹಾಪ್‌ಕಾಮ್ಸ್‌ನಲ್ಲಿ ನಮ್ಮದೇ ರೈತರು ಬೆಳೆದ ಬೆಳೆಯನ್ನಷ್ಟೇ ಮಾರಬೇಕು. ಆ ಬಗ್ಗೆ ಸರಕಾರ ಹೆಚ್ಚು ಆಸಕ್ತಿ ವಹಿಸಬೇಕು.                                                            -ತಿಮ್ಮಯ್ಯ ಅರಿಗೋಡು, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News