ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ : ಸಿದ್ದರಾಮಯ್ಯ
ಬೆಂಗಳೂರು.ಏ.30:ಬರ ಪರಿಸ್ಥಿತಿ ತೀವ್ರವಾಗಿರುವ ಪ್ರದೇಶಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಯವರು ಈ ಸೂಚನೆ ನೀಡಿದರು.
ತಾವು ಬರ ಪೀಡಿತ ಜಿಲ್ಲೆಗಳಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ತೀವ್ರ ಬೇಡಿಕೆ ಕಂಡು ಬಂದಿದೆ. ಆದ್ದರಿಂದ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು. ಇದಕ್ಕೆ ಬೇಕಾಗುವ ಅನುದಾನವನ್ನು ತಕ್ಷಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.
ಇದುವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 293 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿವೆ. ಈ ಮೂಲಕ 2787 ಜನವಸತಿಗಳಿಗೆ ನೀರು ಒದಗಿಸಲಾಗುತ್ತಿದೆ. 61.75 ಲಕ್ಷ ಮಂದಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಶೇ. 15.43 ಮಂದಿಗೆ ನೀರಿನ ಸೌಲಭ್ಯ ಒದಗಿಸಿದಂತೆ ಆಗಿದೆ.
ಪ್ರಗತಿಯಲ್ಲಿರುವ ಯೋಜನೆಗಳ ಮೂಲಕ 6109 ಜನವಸತಿಗಳಿಗೆ ನೀರು ಒದಗಿಸಲಾಗುವುದು. 94.68 ಲಕ್ಷ ಮಂದಿಗೆ ನೀರಿನ ಸೌಲಭ್ಯ ಸಿಗಲಿದೆ. ಇದರಿಂದ ಶೇ. 23ರಷ್ಟು ಗಾಮೀಣ ಜನತೆಗೆ ನೀರಿನ ಸೌಕರ್ಯ ಸಿಗಲಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಯವರಿಗೆ ವಿವರಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕೊಳವೆ ಬಾವಿಗಳ ಮೂಲಕ ಶೇ. 76ರಷ್ಟು, ಕೈ ಪಂಪುಗಳ ಮೂಲಕ ಶೇ. 19 ಮತ್ತು ಮತ್ತು ನದಿ, ಜಲಾಶಯ ಮತ್ತು ಕಾಲುವೆಗಳ ಮೂಲಕ ಶೇ. 4.32ರಷ್ಟು ನೀರು ಪಡೆದು ಒದಗಿಸಲಾಗಿತ್ತಿದೆ ಎಂದು ಹೇಳಿದರು.
ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು, ಬರ ಪೀಡಿತ ಪ್ರದೇಶಗಳಿಗೆ ನೀರು ಒದಗಿಸಿ ಎಂದು ಮುಖ್ಯಮಂತ್ರಿಯವರು ಸೂಚಿಸಿದರು. ಇದಲ್ಲದೆ ನೀರು ಶುದ್ಧಿಕರಣ ಘಟಕಗಳಿಗೆ ಸಂಬಂಧಿಸಿದಂತೆ 2015-16ನೇ ಸಾಲಿನಲ್ಲಿ 8489 ಘಟಕಗಳಿಗೆ ಅನುಮೋದನೆ ಸಿಕ್ಕಿದೆ. 2982 ಘಟಕಗಳನ್ನು ಅಳವಡಿಸಲಾಗಿದೆ. ಅನುಮೋದಿತ ಮೊತ್ತ 588 ಕೋಟಿ ರೂ. ಈ ವರೆಗೆ 221 ಕೋಟಿ ರೂ. ಖರ್ಚಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್, ಅಭಿವೃದ್ಧಿ ಆಯುಕ್ತರು ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲತಾ ಕೃಷ್ಣರಾವ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಸಭೆಯಲ್ಲಿ ಭಾಗವಹಿಸಿದ್ದರು.