ರಾಜ್ಯದಲ್ಲಿ 3,028 ಕೋಟಿ ರೂ ಬಂಡವಾಳ ಹೂಡುವ 42 ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ : ಆರ್.ವಿ. ದೇಶಪಾಂಡೆ
ಬೆಂಗಳೂರು.ಏ.30: ರಾಜ್ಯದಲ್ಲಿ 3,028 ಕೋಟಿ ರೂ ಬಂಡವಾಳ ಹೂಡುವ 42 ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಿದ್ದು, ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸಲು ಸರ್ಕಾರಿ ಸ್ವಾಮ್ಯದಲ್ಲಿ ಇನ್ವೆಸ್ಟ್ ಕರ್ನಾಟಕ ಕಂಪೆನಿ ಸ್ಥಾಪಿಸಲು ನಿರ್ಧರಿಸಲಾಗಿದೆ.ಮೈಸೂರಿನಲ್ಲಿ 150 ಎಕರೆ ಪ್ರದೇಶದಲ್ಲಿ ಔಷಧ ಪಾರ್ಕ್ ನಿರ್ಮಿಸಲು ಅನುಮತಿ ನೀಡಲಾಗಿದೆ.
ಕೈಗಾರಿಕೆಗಳಿಗೆ ಅನುಮತಿ ನೀಡುವ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, 32 ಹೊಸ ಕೈಗಾರಿಕೆಗಳು ಮತ್ತು 8 ಕೈಗಾರಿಕೆಗಳ ವಿಸ್ತರಣೆಗೆ ಅನುಮತಿ ನೀಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಭಾರೀ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಕುಮುಟಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಲುವಾಗಿ ಆರೆಂಟ್ ಕೌಂಟಿ ಸಂಸ್ಥೆಯ ಹೂಡಿಕೆ ಜತೆಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಪ್ಪಂದ ಮಾಡಿಕೊಂಡಿದ್ದ ಭಾರತೀಯ ತೈಲ ಕಂಪೆನಿ, ಮೈಸೂರಿನ ಟಿ.ವಿ.ಎಸ್ ವಿಸ್ತರಣಾ ಘಟಕ ಐದು ಕಂಪೆನಿಗಳಿಗೂ ಸಹ ಅನುಮತಿ ನೀಡಲಾಗಿದೆ. ಈ ನಿರ್ಧಾರದಿಂದ 7,114 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಔಷಧ ಪಾರ್ಕ್ ಸ್ಥಾಪನೆಗೆ ಅನುಮತಿ ನೀಡಿದ್ದು, ಇಲ್ಲಿ ಸಂಪೂರ್ಣವಾಗಿ ಔಷಧಗಳ ಉತ್ಪಾದನೆಯಾಗಲಿದೆ ಎಂದು ತಿಳಿಸಿದರು.
ಇನ್ವೆಸ್ಟ್ ಕರ್ನಾಟಕ ಎಂಬ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆ ಸ್ಥಾಪಿಸುತ್ತಿದ್ದು, ಇದರಿಂದ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಅಗತ್ಯ ಅನುಮತಿಗಳನ್ನು ದೊರಕಿಸಿಕೊಡಲು ಇದರಿಂದ ಸಾಧ್ಯವಾಗಲಿದೆ. ಈಗಾಗಲೇ ಉದ್ಯೋಗ ಮಿತ್ರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದು ಯಥಾ ಪ್ರಕಾರ ಮುಂದುವರೆಯಲಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸುವ ಸಂಬಂಧ ಅಗತ್ಯ ಪ್ರಮಾಣದಲ್ಲಿ ಭೂಮಿ ಒದಗಿಸುವುದಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದ್ದು, ಕೇಂದ್ರದಿಂದ ಈ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಹೊರ ಹೊಮ್ಮಿಲ್ಲ ಎಂದು ಹೇಳಿದರು.