ಬಾಕಿ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡದಿದ್ದರೆ ಶಿಸ್ತುಕ್ರಮ: ಪ್ರಮೋದ್ ಮಧ್ವರಾಜ್
ಕಾರವಾರ, ಎ.30: ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ವಿಲೇವಾರಿಯಾಗದೆ ಇರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡದಿದ್ದರೆ ಶಿಸ್ತುಕ್ರಮ ಜರಗಿಸಲು ಶಿಫಾರಸು ಮಾಡಲಾಗುವುದು ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪರಿಶೀಲನೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಹಣಿ ತಿದ್ದುಪಡಿ, ಸರ್ವೇ, ಭೂದಾಖಲೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕಡತಗಳು ವಿಲೇವಾರಿಗೆ ಬಾಕಿಯಿವೆ. ಎರಡು ವರ್ಷಗಳಿಗಿಂತ ಹಿಂದಿನ ಕಡತಗಳನ್ನು ನಿಗದಿತ ಅವಧಿಯ ಒಳಗಾಗಿ ವಿಲೇವಾರಿ ಮಾಡಲು ಸೂಚಿಸಿ ಸಮಯ ನಿಗದಿಪಡಿಸಲಾಗಿದೆ. ಭೂ ಸುಧಾರಣೆಗೆ ಸಂಬಂಧಿಸಿ 180 ಕಡತಗಳು, 11ಇ ಮತ್ತು ತತ್ಕಾಲ್‌ಗೆ ಸಂಬಂಧಿಸಿದ 271 ಕಡತಗಳು ವಿಲೇವಾರಿಗೆ ಬಾಕಿಯಿವೆ. ಜಿಲ್ಲಾಧಿಕಾರಿ ಕಚೇರಿ ಅಪೀಲ್ ಪ್ರಕರಣಗಳನ್ನು ಪೂರ್ಣವಾಗಿ ಚುಕ್ತಗೊಳಿಸಲಾಗಿದೆ. ಬಾಕಿಯಿರುವ ಕಡತಗಳನ್ನು ತಕ್ಷಣ ವಿಲೇವಾರಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ 481ಕಂದಾಯ ಅದಾಲತ್ ನಡೆಸಲಾಗಿದ್ದು, 92,667 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು, ಇದರಲ್ಲಿ 70,876ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.
ಅಕ್ರಮ ಸಕ್ರಮ ಅರ್ಜಿ ಸ್ವೀಕಾರ: ಅಕ್ರಮ ಸಕ್ರಮ ಯೋಜನೆ 94(ಸಿ) ಅಡಿ ಗ್ರಾಮೀಣ ಪ್ರದೇಶ ಹಾಗೂ 94(ಸಿಸಿ) ಅಡಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಆಗಸ್ಟ್ 27ರವರೆಗೆ ನಾಡಕಚೇರಿಗಳಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಉತ್ತರಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್ ಮತ್ತು ಹಾಡಿ ಭೂಮಿಯಲ್ಲಿ ಹಲವಾರು ಮಂದಿ ಮನೆಗಳನ್ನು ಕಟ್ಟಿ ವಾಸಿಸುತ್ತಿದ್ದು, ಇವರನ್ನು ಸಹ ಈ ಯೋಜನೆಯಡಿ ಪರಿಗಣಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗುವುದು. ಇದೇ ರೀತಿ ಸಾಂಪ್ರದಾಯಿಕ ಮೀನುಗಾರರು ಸಿಆರ್‌ಝಡ್ ಪ್ರದೇಶದಲ್ಲಿ ಗುಡಿಸಲುಗಳನ್ನು ಕಟ್ಟಿದ್ದರೆ ಅವರನ್ನೂ 94 (ಸಿ) ಅಡಿ ತರಲು ಪ್ರಯತ್ನಿಸಲಾಗುವುದು ಎಂದರು.
ಭಟ್ಕಳ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಹಲವಾರು ಕಡತಗಳು ಕಳೆದು ಹೋಗಿದ್ದು, ಅವುಗಳನ್ನು ಪತ್ತೆ ಹಚ್ಚಿ ರೆಕಾರ್ಡ್ ಕೊಠಡಿಯನ್ನು 6ತಿಂಗಳ ಒಳಗಾಗಿ ಸಮರ್ಪಕಗೊಳಿಸುವಂತೆ ಉಪವಿಭಾಗಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ. ಶಾಸಕರಾದ ಸತೀಶ್ ಸೈಲ್, ಮಂಕಾಳು ವೈದ್ಯ, ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.