ಮಾನವ ಹಕ್ಕುಗಳ ಉಲ್ಲಂಘನೆ ವಿಷಾದಕರ: ನ್ಯಾ. ನಟರಾಜ್
ಕುಶಾಲನಗರ, ಎ.30: ಪ್ರತಿಯೊಬ್ಬರು ಏಕರೀತಿಯ ಮಾನವ ಹಕ್ಕುಗಳನ್ನು ಹೊಂದಿದ್ದು ಅದರ ಬಳಕೆಗೆ ಸಮಾನ ಅವಕಾಶ ಹೊಂದಿರುವುದಾಗಿ ಕುಶಾಲನಗರ ಅಪರ ನ್ಯಾಯಾಧೀಶ ಎಸ್.ನಟರಾಜ್ ತಿಳಿಸಿದ್ದಾರೆ.
ಅವರು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಹಾಗೂ ಕುಶಾಲನಗರ ರೋಟರಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಹಾಗೂ ಮಾನವ ಹಕ್ಕುಗಳ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯುವಜನಾಂಗ ಮಾನವ ಹಕ್ಕುಗಳ ಬಗ್ಗೆ ಅರಿವು ಹೊಂದುವುದು ತುಂಬ ಅಗತ್ಯವಾಗಿದೆ ಎಂದ ಅವರು, ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿ ಕ್ಷೇತ್ರಗಳಲ್ಲೂ ಪ್ರತಿನಿತ್ಯ ಹಲವಾರು ಸಂದರ್ಭಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದರಿಂದ ಯುವಜನತೆ ಮತ್ತು ಸಾರ್ವಜನಿಕರಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ತುಂಬ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ಡಿವೈಎಸ್ಪಿ ಟಿ.ಕುಮಾರ್ ಮಾತನಾಡಿದರು.
ರೋಟರಿ ಸಂಸ್ಥೆ ಅಧ್ಯಕ್ಷೆ ಶೋಭಾ ಸತೀಶ್ ರೋಟರಿ ಸೇವಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಕೆ.ಕೇಶವಯ್ಯ ಅಧ್ಯಕ್ಷತೆ ವಹಿಸಿದ್ದರು.ಮಾನವ ಹಕ್ಕುಗಳ ಸಮಿತಿ ಕಾರ್ಯದರ್ಶಿ ಸಿ. ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಪ್ರಿಯಾಂಕಾ ನಿರೂಪಿಸಿದರು. ಉಷಾ ಪ್ರಾರ್ಥಿಸಿದರು. ಎಚ್.ಬಿ.ಲಿಂಗಮೂರ್ತಿ ಸ್ವಾಗತಿಸಿದರು.ಕೆ.ಕೆ.ಮಹೇಶ್ ವಂದಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಮಾನವ ಹಕ್ಕುಗಳ ಕುರಿತು ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.