×
Ad

ಯೋಧರನ್ನು ಗೌರವಿಸಿ: ನ್ಯಾ. ಗೋಪಾಲಗೌಡ ಕರೆ

Update: 2016-04-30 21:59 IST

ಮಡಿಕೇರಿ, ಎ.30: ಕಾವೇರಿ ಜನ್ಮಭೂಮಿ ಟ್ರಸ್ಟ್ ವತಿಯಿಂದ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಚೇರಂಗಾಲದಲ್ಲಿ ನಿರ್ಮಾಣಗೊಂಡಿರುವ ‘ವಾರ್ ಮೆಮೋರಿಯಲ್’(ಯುದ್ಧ ಸ್ಮಾರಕ)ನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ.ಗೋಪಾಲಗೌಡ ಹಾಗೂ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಮಾತನಾಡಿ, ದೇಶ ಕಾಯುವ ಎಲ್ಲ ಹಂತದ ರಕ್ಷಣಾ ಪಡೆಗಳ ಯೋಧರನ್ನು ರಾಷ್ಟ್ರದ ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು. ಯೋಧರು ದೇಶ ರಕ್ಷಣೆಯಲ್ಲಿ ಸದಾ ಮಗ್ನರಾಗಿರುವುದರಿಂದಲೇ ನಾವುಗಳು ನೆಮ್ಮದಿಯಾಗಿ ಬದುಕುತ್ತಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ವಾಯುಸೇನೆ, ಭೂಸೇನೆ, ನೌಕಾಸೇನೆ, ಬಿಎಸ್‌ಎಫ್, ಎನ್‌ಎಸ್‌ಟಿ ಹೀಗೆ ದೇಶದ ವಿವಿಧ ರಕ್ಷಣಾ ಪಡೆಗಳ ಯೋಧರಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು. ಜೊತೆಗೆ ಯೋಧರನ್ನು ಸದಾ ಸ್ಮರಿಸಬೇಕು. ಕಾವೇರಿ ಜನ್ಮಭೂಮಿ ಟ್ರಸ್ಟ್ ವತಿಯಿಂದ ಚೇರಂಗಾಲದಂತಹ ಗ್ರಾಮೀಣ ಪ್ರದೇಶದಲ್ಲಿ ಯುದ್ಧ ಸ್ಮಾರಕ ನಿರ್ಮಿಸಿ ಅರ್ಥಪೂರ್ಣ ಹಾಗೂ ಮಹತ್ವ ಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಯೋಧರ ಬೇಕು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆಯಾಗಿಟ್ಟು ರಾಷ್ಟ್ರ ಕಾಯುವ ಸೈನಿಕರನ್ನು ಪ್ರತಿನಿತ್ಯ ಸ್ಮರಿಸಬೇಕು ಎಂದು ಅವರು ಹೇಳಿದರು. ಲೆಫ್ಟಿನೆಂಟ್ ಜನರಲ್(ನಿವೃತ್ತ) ಬಿ.ಸಿ.ನಂದ ಮಾತನಾಡಿ, 1830ರ ದಶಕದಲ್ಲಿ ಬ್ರಿಟಿಷರು ಕೊಡಗನ್ನು ಆಳುತ್ತಿದ್ದ ಸಂದರ್ಭದಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಕೊಡಗನ್ನು ಉಳಿಸಲು ಪ್ರಯತ್ನಿಸಿದರು. ದೇಶದಲ್ಲಿ ವಾಸಿಸುವ ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು. ಏರ್ ಮಾರ್ಷಲ್ (ನಿವೃತ್ತ) ಕೆ.ಸಿ.ಕಾರ್ಯಪ್ಪ ಮಾತನಾಡಿ, ಚೇರಂಗಾಲದಲ್ಲಿ ನಿರ್ಮಿಸಿರುವಂತೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಯುದ್ಧ ಸ್ಮಾರಕವನ್ನು ನಿರ್ಮಿಸುವುದು ಅಗತ್ಯ. ಯುದ್ಧ ಸ್ಮಾರಕವನ್ನು ನಿರ್ಮಿಸಿ ಯುವ ಜನರು ಸೇನೆಗೆ ಸೇರುವಂತಾಗಲು ಪ್ರೇರೇಪಿಸಬೇಕು ಎಂದು ಅವರು ಹೇಳಿದರು. ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೊಡಗು ವೀರನಾಡು, ಕ್ರೀಡಾಪಟುಗಳ ತವರೂರು, ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಸದಾ ನೆನೆಯಬೇಕು ಎಂದು ಹೇಳಿದರು. ಸೈನಿಕರ ಬೇಕು ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹುಟ್ಟಿದ ಊರಿನವರೆಂದರೆ ಗೌರವ ಹೆಚ್ಚು. ಚೇರಂಗಾಲದಲ್ಲಿ ನಿರ್ಮಾಣ ಮಾಡಲಾಗಿರುವ ಯುದ್ಧ ಸ್ಮಾರಕ ಬೇರೆ ಗ್ರಾಮಗಳಿಗೂ ಮಾದರಿಯಾಗಲಿ ಎಂದರು.

ಲೆಫ್ಟ್ಟಿನೆಂಟ್ ಜನರಲ್(ನಿವೃತ್ತ) ಸಿ.ಎ.ಸೋಮಣ್ಣ, ಕಾವೇರಿ ಜನ್ಮಭೂಮಿ ಟ್ರಸ್ಟ್‌ನ ಎಂ.ಸಿ.ರವಿಕುಮಾರ್ ಮಾತನಾಡಿದರು.

ಪಿ.ವಿ.ಎಸ್.ಎಂ.ಲೆಫ್ಟ್ಟಿನೆಂಟ್ ಜನರಲ್ (ನಿವೃತ್ತ) ಸಿ.ಎಸ್.ಸೋಮಣ್ಣ, ಪಿವಿಎಸ್‌ಎಂ, ಮುಕ್ಕಾಟ್ಟೀರ ಕಸ್ತೂರಿ ಅಪ್ಪಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಯುದ್ಧ ಸ್ಮಾರಕದ ಬಳಿ ಗಣ್ಯರು ಸಸಿಗಳನ್ನು ನೆಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News