×
Ad

ಚುರುಕಿನಿಂದ ಕಡತಗಳ ವಿಲೇವಾರಿ ಮಾಡಿ: ಪ್ರಮೋದ್ ಮಧ್ವರಾಜ್

Update: 2016-04-30 22:01 IST

ಕಾರವಾರ,ಎ.30: ಸಾರ್ವಜನಿಕರು ಇತರೆ ಇಲಾಖೆಗಳಿಗಿಂತ ಹೆಚ್ಚಾಗಿ ಕಂದಾಯ ಇಲಾಖೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಚುರುಕಿನಿಂದ ಕೆಲಸ ಮಾಡಿ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಉಡುಪಿ ಶಾಸಕ ಹಾಗೂ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರಕಾರದಲ್ಲಿ 33 ಇಲಾಖೆಗಳಿವೆ. ಆದರೆ, ಆ ಎಲ್ಲ ಇಲಾಖೆಗಳಿಗಿಂತ ಹೆಚ್ಚಾಗಿ ಕಂದಾಯ ಇಲಾಖೆಯನ್ನು ಸಾರ್ವಜನಿಕರು ನೆಚ್ಚಿಕೊಂಡಿದ್ದಾರೆ. ಶೇ. 70 ರಷ್ಟು ಕಾರ್ಯಗಳು ಕಂದಾಯ ಇಲಾಖೆಗೆ ಸಂಬಂಧಿಸಿದವೇ ಆಗಿದೆ. ಆದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅಧಿಕಾರಿಗಳು ತಮ್ಮ ಬಳಿ ಇರುವ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದರು.

ಸಾರ್ವಜನಿಕ ಸಮಸ್ಯೆಗಳನ್ನು ಬಹುಬೇಗ ಇತ್ಯರ್ಥಪಡಿಸುವ ಉದ್ದೇಶದಿಂದ ಈಗಾಗಲೇ ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಅಹವಾಲು ಸ್ವೀಕರಿಸಲಾಗಿದೆ. ಶನಿವಾರ ಜಿಲ್ಲೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಲಾಗುತ್ತಿದೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಬಾಕಿ ಉಳಿದಿರುವ ಕಡತಗಳನ್ನು ಇನ್ನೂ 6 ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ವಿಲೇವಾರಿ ಮಾಡದ ಅಥವಾ ಕಡತಗಳನ್ನು ಸಮರ್ಪಕವಾಗಿ ಇತ್ಯರ್ಥಪಡಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಶನಿವಾರ ಬೆಳಗ್ಗೆ 10 ರಿಂದ 1 ಗಂಟೆವರೆಗೆ ಅಧಿಕಾರಿಗಳ ಜೊತೆ ಕಂದಾಯ ಇಲಾಖೆಗೆ ಸಂಬಂಧಿಸಿ ಚರ್ಚಿಸಲಾಗುವುದು. ಬಳಿಕ ಮಧ್ಯಾಹ್ನ ಜಿಲ್ಲೆಯ ಯಾವುದಾದರೂ ಒಂದು ತಾಲೂಕಿನ ಕಂದಾಯ ಕಚೇರಿಗೆ ತೆರಳಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ 35 ಕ್ಕೂ ಹೆಚ್ಚಿನ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಿದ ಅವರು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಹಾಗೂ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News