×
Ad

ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಮನವಿ

Update: 2016-04-30 22:05 IST

 ಶಿವಮೊಗ್ಗ,ಎ.30: ನಗರದ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಶನಿವಾರ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗೀಯ ಡೆಪ್ಯೂಟಿ ಜನರಲ್ ಮ್ಯಾನೇಜರ್ (ಡಿ.ಆರ್.ಎಂ.) ಅತುಲ್ ಗುಪ್ತಾರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈಲ್ವೆಯ ನಿಲ್ದಾಣದ ಪ್ಲ್ಯಾಟ್‌ಫಾರಂಗಳು ಸೇರಿದಂತೆ ವಿವಿಧೆಡೆ ಭೆೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದಭರ್ದಲ್ಲಿ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪರ ಆಪ್ತ ಸಹಾಯಕ ಕೆ.ಪಿ.ಪುರುಷೋತ್ತಮ, ಕಚೇರಿ ಸಿಬ್ಬಂದಿಯಾದ ದತ್ತಾ, ರಾಜು ಸೇರಿದಂತೆ ಸ್ಥಳೀಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮನವಿ ಅರ್ಪಣೆ: ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯರ ಆಪ್ತ ಸಹಾಯಕ ಕೆ.ಪಿ.ಪುರುಷೋತ್ತಮ ರವರು ಅತುಲ್ ಗುಪ್ತಾಗೆ ಮನವಿ ಪತ್ರ ಅರ್ಪಿಸಿದರು. ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಪ್ರೀ ಪೇಡ್ ಆಟೊ ಕೌಂಟರ್ ತೆರೆಯಲು ಅನುಮತಿ ನೀಡಲಾಗಿದ್ದು, ಆದರೆ ಇಲ್ಲಿಯವರೆಗೂ ಕೌಂಟರ್ ಪ್ರಾರಂಭಕ್ಕೆ ಕ್ರಮಕೈಗೊಂಡಿಲ್ಲ. ಇತ್ತೀಚೆಗೆ ನಿಲ್ದಾಣ ಮುಂಭಾಗ ನಡೆಸಿದ ರಸ್ತೆ ಡಾಂಬರೀಕರಣ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮರು ಡಾಂಬರೀಕರಣ ನಡೆಸಬೇಕು. ಪ್ಲ್ಯಾಟ್‌ಫಾರಂ ವಿಸ್ತರಣಾ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಪ್ಲ್ಯಾಟ್‌ಫಾರಂ ಎರಡರಲ್ಲಿ ಕೋಚ್ ಪೊಸಿಷನ್ ಇಂಡಿಕೇಷನ್ ಡಿಸ್‌ಪ್ಲೇ ವ್ಯವಸ್ಥೆ ಮಾಡಬೇಕು. ರೈಲುಗಳು ಆಗಮನ-ನಿರ್ಗಮನದ ವೇಳೆ ಮೈಕ್ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಬೇಕು. ನಿಲ್ದಾಣ ಆವರಣದಲ್ಲಿರುವ ಟಿಕೆಟ್ ವೆಂಡಿಂಗ್ ಯಂತ್ರದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿಯ ಕೊರತೆಯಿದ್ದು, ಈ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ರಾತ್ರಿ ವೇಳೆ ಪ್ಲ್ಯಾಟ್‌ಫಾರಂ 2 ರಲ್ಲಿ ನಿಲುಗಡೆ ಮಾಡುವ ಬೆಂಗಳೂರಿಗೆ ತೆರಳುವ ರೈಲನ್ನು ಪ್ಲ್ಯಾಟ್‌ಫಾರಂ 1 ರಲ್ಲಿ ನಿಲುಗಡೆ ಮಾಡುವ ವ್ಯವಸ್ಥೆ ಮಾಡಬೇಕು. ನಿಲ್ದಾಣ ಆವರಣದಲ್ಲಿ ಪ್ರಯಾಣಿಕರಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಸಲಹೆ ನೀಡಲಾಗಿದೆ. ಸೂಕ್ತ ಕ್ರಮ:

ಅಹವಾಲು ಆಲಿಸಿದ ನಂತರ ಅತುಲ್ ಗುಪ್ತಾರವರು ಮಾತನಾಡಿ, ಮುಂದಿನ ಒಂದೆರೆಡು ವಾರಗಳಲ್ಲಿ ಪ್ರೀ ಪೇಡ್ ಆಟೊ ಕೌಂಟರ್ ಆರಂಭಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಿ ಎಂದು ಸ್ಥಳೀಯ ರೈಲ್ವೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹಾಗೆಯೇ ಇತರೆ ಬೇಡಿಕೆಗಳ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಜರಗಿಸ ಲಾಗುವುದು ಎಂದು ಇದೇ ಸಂದಭರ್ದಲ್ಲಿ ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News